ಬ್ರೆಜಿಲ್ನಲ್ಲಿ ಪೊಲೀಸರ ವಿಭಿನ್ನ ‘ಕಾರ್ನಿವಲ್’ ಕಾರ್ಯಾಚರಣೆ ಕಳ್ಳರನ್ನು ಹಿಡಿಯಲು ಪವರ್ ರೇಂಜರ್ಸ್ ಆದ ಪೊಲೀಸರು

ಬ್ರೆಜಿಲ್: ಕಾರ್ಟೂನ್ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಸ್ಕೂಬಿ ಡೂ ಕಾರ್ಟೂನ್ ಕೂಡ ಬಹುತೇಕರಿಗೆ ಇಷ್ಟ ಅದರಲ್ಲಿ ಬರುವ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರವಂತೂ ಇಷ್ಟಪಡದವರಿಲ್ಲ. ಆದರೆ ಈ ಪಾತ್ರವನ್ನು ಜನರು ಕಳ್ಳತನಕ್ಕೆ ಬಳಸಿಕೊಂಡಿರುವುದು ವಿಶಾದದ ಸಂಗತಿ.

ಈ ಪಾತ್ರಧಾರಿಗಳ ವೇಷತೊಟ್ಟು ಕಳ್ಳರು ಮೊಬೈಲ್ ಕಳ್ಳತನಕ್ಕಿಳಿದಿದ್ದರು. ಅಂಡರ್ ಕವರ್ ಪೊಲೀಸರು ಇವರ ಮೇಲೆ ನಿಗಾ ಇಟ್ಟಿದ್ದರು. ಅಂತೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ಇವರನ್ನು ಹಿಡಿಯಲು ನೆಟ್ಫ್ಲಿಕ್ಸ್ನಲ್ಲಿ ಬಂದಿದ್ದ ಫೇಮಸ್ ಸೀರೀಸ್ ಸ್ಕ್ವಿಡ್ ಗೇಮ್ನಲ್ಲಿ ಬರುವ ಪಾತ್ರಧಾರಿಯಂತೆ ವೇಷ ತೊಟ್ಟು ಹಿಡಿದಿರುವುದೇ ವಿಶೇಷ. ಈ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ಈ ಕಳ್ಳರಲ್ಲಿ ಒಬ್ಬೊಬ್ಬರ ಬಳಿ ಕನಿಷ್ಠವೆಂದರೂ ಎಂಟು ಫೋನ್ಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಸಾವೊ ಪಾಲೊ ಪೊಲೀಸ್ ಠಾಣೆಗೆ ಕಳ್ಳರನ್ನು ಕರೆದೊಯ್ಯುವ ಮೊದಲು ಪೊಲೀಸ್ ಅಧಿಕಾರಿಗಳು ಸಾಧನಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಕಳ್ಳತನ ಮತ್ತು ದರೋಡೆಗಳಲ್ಲಿ ಪರಿಣತಿ ಹೊಂದಿರುವ ಗ್ಯಾಂಗ್ಗಳು ವಿಶೇಷ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಜನಸಂದಣಿಯನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ, ಪವರ್ ರೇಂಜರ್ಗಳಂತೆ ವೇಷ ಧರಿಸಿದ ಪೊಲೀಸರು ಸಾವೊ ಪಾಲೊದ ಇಬಿರಾಪುಯೆರಾ ಪಾರ್ಕ್ ಬಳಿ ಕಳ್ಳನನ್ನು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರು.
ಅದೇ ರೀತಿ, ಪ್ರೇಮಿಗಳ ದಿನದಂದು, ಪೆರುವಿನ ರಾಜಧಾನಿ ಲಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಪಿಬರಾ ವೇಷ ಧರಿಸಿ ಮಾದಕವಸ್ತು ದಾಳಿ ನಡೆಸಿ 1,700 ಪ್ಯಾಕೆಟ್ ಕೊಕೇನ್ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.