ಜೈಲಿಂದ ಓಡಿಹೋದ ಪಾಕಿಸ್ತಾನಿ ಕೈದಿಗಳು! ಪೊಲೀಸರ ಮೇಲೆ ಹಲ್ಲೆ ನಡೆಸಿ ಕಸ್ಟಡಿಯಿಂದ ಎಸ್ಕೇಪ್

ಶ್ರೀನಗರ: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಿಂದ ಮೂವರು ಪಾಕಿಸ್ತಾನಿ ಕೈದಿಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ ಸಂಜೆ 5:05ರ ಸುಮಾರಿಗೆ ಜಮ್ಮುವಿನ ಆರ್ಎಸ್ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮೂವರು ಕೈದಿಗಳು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ. ಇಬ್ಬರು ಪಾಕಿಸ್ತಾನಿಗಳು ಸೇರಿ ಮೂವರು ಕೈದಿಗಳು ಜೈಲಿಂದ ಓಡಿ ಹೋಗಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ ಎನ್ನಲಾಗಿದೆ.ತಪ್ಪಿಸಿಕೊಂಡ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮುವಿನ ನಿವಾಸಿ ಕರಣ್ಜಿತ್ ಸಿಂಗ್ ಅಲಿಯಾಸ್ ಗುಗ್ಗಾ ಎಂದು ಗುರುತಿಸಲಾಗಿದೆ.ಕೈದಿಗಳು ಪರಾರಿಯಾದ ಬೆನ್ನಲ್ಲೇ ಪೊಲೀಸ್ ಹಾಗೂ ಅರೆಸೇನಾ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಕೈದಿಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ.ಸದ್ಯ ಈ ಪ್ರದೇಶದಲ್ಲಿ ತಾತ್ಕಾಲಿಕ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ ವಾಹನಗಳು ಮತ್ತು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಬಾಲಾಪರಾಧಿ ಗೃಹದೊಳಗೆ ಕೈದಿಗಳಿಗೆ ಶಸ್ತ್ರಾಸ್ತ್ರಗಳು ಹೇಗೆ ದೊರಕಿದವು ಎಂಬುದರ ಕುರಿತು ಪ್ರಶ್ನೆಗಳು ಮೂಡಿದ್ದು, ಈ ಬಗ್ಗೆಯೂ ತನಿಖೆ ಆರಂಭವಾಗಿದೆ.