ಬ್ಯಾಡಗಿ ಮಾರುಕಟ್ಟೆಯಲ್ಲಿ ಇತಿಹಾಸ: ಕ್ವಿಂಟಲ್ ಮೆಣಸಿನಕಾಯಿಗೆ ಬರೋಬ್ಬರಿ ₹89,999!

ಬ್ಯಾಡಗಿ : ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಮವಾರ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹89,999 ಹಾಗೂ ಕಡ್ಡಿ ಮೆಣಸಿನಕಾಯಿ ₹69,999 ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ರೈತ ವಿಜಯಕುಮಾರ ಪ್ರಕಾಶ ಸಜ್ಜನರ ಬೆಳೆದ ಡಬ್ಬಿ ಹಾಗೂ ಕಡ್ಡಿ ಮೆಣಸಿನಕಾಯಿ ಸೋಮವಾರ ಮಾರುಕಟ್ಟೆಯಲ್ಲಿ ಬರೋಬ್ಬರಿ ₹89,999 ಹಾಗೂ ₹69,999ಗೆ ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿದೆ.
ರೋಣ ತಾಲೂಕಿನಲ್ಲಿ ಒಣ ಬೇಸಾಯವೇ ಪ್ರಮುಖ. ಇಂತಹ ಪ್ರದೇಶದಲ್ಲಿಯೂ ಸಹ ಯಾವುದೇ ರಾಸಾಯನಿಕ ಬಳಸದೇ ಕೃಷಿಯಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ಕೃಷಿಗೆ ಕೈ ಹಾಕಿದ 23 ವರ್ಷದ ಪದವೀಧರ ಯುವ ರೈತ ವಿಜಯಕುಮಾರ ಸಜ್ಜನರ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಇಳುವರಿ ತೆಗೆದು ಸೈ ಎನಿಸಿಕೊಂಡಿದ್ದಾರೆ.

ಮಾರುಕಟ್ಟೆ ಆರಂಭವಾದ ನಂತರ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಯಾವುದೇ ತಳಿಯ ಮೆಣಸಿನಕಾಯಿ ಮಾರಾಟವಾಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಡಬ್ಬಿ ತಳಿ ಬೆಲೆ ₹50ರಿಂದ ₹60 ಸಾವಿರ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿತ್ತು. ಈ ವರ್ಷ ಆವಕದ ಕೊರತೆ ಹಾಗೂ ರೈತ ವಿಜಯಕುಮಾರ ಬೆಳೆದ ಮೆಣಸಿನ ಗುಣಮಟ್ಟದಿಂದಾಗಿ ಬಂಗಾರದ ಬೆಲೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಅವರು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.