ಶಾಲಾ ಬಸ್ಗೆ ಮೀನಿನ ಲಾರಿ ಡಿಕ್ಕಿ; ಏಳು ವಿದ್ಯಾರ್ಥಿಗಳಿಗೆ ಗಾಯ!

ಉಳ್ಳಾಲ: ಮೀನು ಸಾಗಾಟದ ಲಾರಿಯೊಂದು ಖಾಸಗಿ ಶಾಲಾ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕೆಲವು ವಿಧ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಾದ ಘಟನೆ ರಾ.ಹೆ.66 ರ ಕಾಪಿಕಾಡು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.


ಖಾಸಗಿ ಶಾಲೆಗೆ ಸೇರಿದ ಬಸ್ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಹಿಂದಿನಿಂದ ಧಾವಿಸಿ ಬಂದ ಮೀನಿನ ಕ್ಯಾಂಟರ್ ಬಲವಾಗಿ ಢಿಕ್ಕಿ ಹೊಡೆದಿದೆ. ಕ್ಯಾಂಟರ್ ಢಿಕ್ಕಿಯ ರಭಸಕ್ಕೆ ಶಾಲಾ ಬಸ್ಸಿನ ಹಿಂಭಾಗದ ಸೀಟುಗಳೇ ಕಿತ್ತು ಹೋಗಿವೆ.ಗೋವಾದಿಂದ ಕೇರಳದ ಕಡೆಗೆ ಕ್ಯಾಂಟರ್ ನಲ್ಲಿ ಮೀನು ಸಾಗಿಸುತ್ತಿದ್ದ ಕುಂದಾಪುರ ಮೂಲದ ಚಾಲಕ ಸಂಜೀವ ಎಂಬವರು ನಿದ್ರೆಯ ಮಂಪರಿನಲ್ಲಿದ್ದ ಪರಿಣಾಮ ಅಪಘಾತ ನಡೆದಿರುವುದಾಗಿ ತಿಳಿದು ಬಂದಿದೆ.
ಘಟನೆಯಿಂದ ಬಸ್ಸಿನೊಳಗಿದ್ದ ನಾಲ್ಕು ವಿದ್ಯಾರ್ಥಿಗಳು ಹಾಗೂ ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ.