ಅಳವಡಿಕೆ ವೇಳೆ ಸಮತೋಲನ ತಪ್ಪಿದ ಬೃಹತ್ ಕಂಬ; ಕಾರ್ಮಿಕರ ನಿರ್ಲಕ್ಷ್ಯಕ್ಕೆ ಬಲಿಯಾದ ಸಮಾಜವಾದಿ ನಾಯಕ

ಲಕ್ಕೋ: ಉತ್ತರ ಪ್ರದೇಶದ ಪ್ರತಾಪೃಢ ಜಿಲ್ಲೆಯ ಅಂತು ಪ್ರದೇಶದಲ್ಲಿ 1,000 ಕೆಜಿ ತೂಕದ ಹೈಮಾಸ್ಟ್ ಲೈಟಿಂಗ್ ಕಂಬವೊಂದು ಚಲಿಸುತ್ತಿದ್ದ ಎಸ್ಯುವಿ ಕಾರಿನ ಮೇಲೆ ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ (47) ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಬಾಬುಗಂಜ್ ಮಾರುಕಟ್ಟೆ ಸಮೀಪದ ಪೆಟ್ರೋಲ್ ಪಂಪ್ ಎದುರು ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆ ವೇಳೆ ಕಾರ್ಮಿಕರು ಹೈಮಾಸ್ಟ್ ಕಂಬವನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಅಳವಡಿಕೆ ವೇಳೆ ಭಾರೀ ಗಾತ್ರದ ಕಂಬವು ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ರಸ್ತೆ ಮೂಲಕ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ.
ಮೃತ ಲಾಲ್ ಬಹದ್ದೂರ್ ಯಾದವ್ ಅವರು 2022ರ ನಗರ ಪಂಚಾಯತ್ ಚುನಾವಣೆಯಲ್ಲಿ ಅಂತು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದ ಅವರು ಲೋಕೋಪಯೋಗಿ ಇಲಾಖೆ ಪಿಡಬ್ಲೂಡಿ ಗುತ್ತಿಗೆದಾರರಾಗಿದ್ದರು. ಘಟನೆ ಸಂಭವಿಸಿದ ವೇಳೆ ತಮ್ಮ ಹುಂಡೈ ಕ್ರೆಟಾ ಕಾರಿನಲ್ಲಿ ನಗರದ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಹೈಮಾಸ್ಟ್ ಅಳವಡಿಕೆ ಕಾರ್ಯದ ವೇಳೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಗಂಭೀರ ಕಳವಳ ವ್ಯಕ್ತವಾಗಿದೆ.
ಪ್ರತಾಪೃಢ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪಕ್ ಭುಕರ್ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.