ಯುಎಇ ಇತಿಹಾಸದ ಕನ್ನಡಿಗ, ಖ್ಯಾತ ಭಾರತೀಯ ಛಾಯಾಗ್ರಾಹಕ ರಮೇಶ್ ಶುಕ್ಲಾ ದುಬೈನಲ್ಲಿ ನಿಧನ!

ದುಬೈ: ಯುಎಇಯ ಬೆಳವಣಿಗೆಯ ಮಹತ್ವದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಅಮರಗೊಳಿಸಿದ್ದ ಖ್ಯಾತ ಭಾರತೀಯ ಛಾಯಾಗ್ರಾಹಕ ರಮೇಶ್ ಶುಕ್ಲಾ (87) ಹೃದಯಾಘಾತದಿಂದ ಭಾನುವಾರ ನಿಧನರಾದರು. ಆರು ದಶಕಗಳಿಗೂ ಹೆಚ್ಚು ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ನ ಪರಿವರ್ತನೆಯನ್ನು ದಾಖಲಿಸಿದ ಅವರು ದೇಶದ ‘ರಾಜಮನೆತನದ ಛಾಯಾಗ್ರಾಹಕ’ ಎಂದೇ ಪ್ರಸಿದ್ಧರಾಗಿದ್ದರು.

1971ರ ಡಿಸೆಂಬರ್ 2ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಚನೆಗೆ ಸಂಬಂಧಿಸಿದಂತೆ ಏಳು ಎಮಿರೇಟ್ಗಳ ಆಡಳಿತಗಾರರು ಒಕ್ಕೂಟ ಒಪ್ಪಂದಕ್ಕೆ ಸಹಿ ಹಾಕಿದ ಐತಿಹಾಸಿಕ ಕ್ಷಣವನ್ನು ರಮೇಶ್ ಶುಕ್ಲಾ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಯುಎಇ ಸ್ಥಾಪಕ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಆ ಚಿತ್ರವು ನಂತರ ‘ಒಕ್ಕೂಟದ ಆತ್ಮ’ ಎಂಬ ಹೆಸರಿನಲ್ಲಿ ಯುಎಇಯ ಅಧಿಕೃತ ಚಿಹ್ನೆಯಾಗಿ ಖ್ಯಾತಿ ಪಡೆದಿತು. ಇಂದು ಆ ಚಿತ್ರವನ್ನು ದೇಶದ ಪಾಸ್ಪೋರ್ಟ್ಗಳು, ಕರೆನ್ಸಿ ನೋಟುಗಳು ಮತ್ತು ಅಂಚೆಚೀಟಿಗಳಲ್ಲಿ ಗೌರವದಿಂದ ಪ್ರದರ್ಶಿಸಲಾಗುತ್ತಿದೆ.ಗುಜರಾತ್ನ ಅಹಮದಾಬಾದ್ ಮೂಲದ ರಮೇಶ್ ಶುಕ್ಲಾ 1965ರಲ್ಲಿ ಕೇವಲ 20ನೇ ವಯಸ್ಸಿನಲ್ಲಿ ದೋಣಿಯಲ್ಲಿ ಶಾರ್ಜಾಗೆ ಬಂದಿದ್ದರು.

ತಂದೆ ಉಡುಗೊರೆಯಾಗಿ ನೀಡಿದ ರೋಲಿಕ್ರೌಡ್ ಕ್ಯಾಮೆರಾವೇ ಅವರ ಆಸ್ತಿಯಾಗಿತ್ತು. ನಂತರ ಅವರು ದುಬೈನಲ್ಲಿ ನೆಲೆಸಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದರು.ಯುಎಇಯ ಸಾಂಸ್ಕೃತಿಕ ಇತಿಹಾಸಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಅವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಲಾಯಿತು. ಈ ಗೌರವವನ್ನು ಪಡೆದ ಮೊದಲ ವಿದೇಶಿಯರಲ್ಲಿ ಅವರು ಒಬ್ಬರಾಗಿದ್ದರು. ಅವರ ವರ್ಣಚಿತ್ರಗಳು ದುಬೈ ಮೆಟ್ರೋ ನಿಲ್ದಾಣಗಳು ಹಾಗೂ ಎತಿಹಾದ್ ಮ್ಯೂಸಿಯಂನಲ್ಲಿ ನಿಯಮಿತವಾಗಿ ಪ್ರದರ್ಶಿಸಲಾಗುತ್ತಿವೆ. ದುಬೈನಲ್ಲಿರುವ ರಮೇಶ್ ಆರ್ಟ್ ಗ್ಯಾಲರಿಯಲ್ಲಿ ಶೇಖ್ ಜಾಯೆದ್ ಅವರ ಅಪರೂಪದ ಚಿತ್ರಗಳ ಸಂಗ್ರಹವೂ ಇದೆ.ಪತ್ನಿ ತರುಲತಾ ಶುಕ್ಲಾ ಹಾಗೂ ಪುತ್ರ ನೀಲ್ ಶುಕ್ಲಾ ಅವರ ಛಾಯಾಗ್ರಹಣ ಪ್ರಯಾಣಕ್ಕೆ ಸದಾ ಬೆಂಬಲವಾಗಿದ್ದರು. ಅಂತ್ಯಕ್ರಿಯೆ ದುಬೈನಲ್ಲಿ ನಡೆಯಲಿದ್ದು, ಯುಎಇ ಆಡಳಿತಗಾರರು ಮತ್ತು ಸಾಂಸ್ಕೃತಿಕ ವಲಯದ ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ರಮೇಶ್ ಶುಕ್ಲಾ ಅವರ ನಿಧನವು ಯುಎಇಯ ಇತಿಹಾಸವನ್ನು ಕಣ್ಣಾರೆ ಕಂಡು ದಾಖಲಿಸಿದ ಒಬ್ಬ ಮಹಾನ್ ಸಾಕ್ಷಿದಾರನನ್ನು ಕಳೆದುಕೊಂಡಂತಾಗಿದೆ.