ಮೆಟ್ರೋ ಪಿಲ್ಲರ್ ಕುಸಿದು ಆಟೋ, ಕಾರು ಅಪ್ಪಚ್ಚಿ; ನಾಲ್ವರಿಗೆ ಗಾಯ!

ಮುಂಬೈ: ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ನ (Mumbai Metro Pillar) ಒಂದು ಭಾಗ ಕುಸಿದು ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಶನಿವಾರ (ಇಂದು) ಮಧ್ಯಾಹ್ನ ಮುಲುಂಡ್ ಪ್ರದೇಶದ ಜಾನ್ಸನ್ & ಜಾನ್ಸನ್ ಕಂಪನಿಯ ಬಳಿ ಘಟನೆ ನಡೆದಿದೆ. ಎಲ್ಬಿಎಸ್ ರಸ್ತೆಯಲ್ಲಿ (LBS Road) ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬದ ಸಿಮೆಂಟ್ ಭಾಗವು ಏಕಾಏಕಿ ಕುಸಿದು ಕೆಳಗೆ ಹಾದುಹೋಗುತ್ತಿದ್ದ ಆಟೋರೀಕ್ಷಾ ಹಾಗೂ ಕಾರಿನ ಮೇಲೆ ಬಿದ್ದಿದೆ. ಸಿಮೆಂಟ್ ವಾಲ್ ಬಿದ್ದ ರಭಸಕ್ಕೆ ಕಾರು, ಆಟೋ ಅಪ್ಪಚ್ಚಿಯಾಗಿವೆ

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮಧ್ಯಾಹ್ನ 12:20 ರ ಸುಮಾರಿಗೆ ಈ ಘಟನೆ ನಡೆದಿದೆ. ಸಿಮೆಂಟ್ ವಾಲ್ ಬಿದ್ದ ಪರಿಣಾಮ ಆಟೋರೀಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ನಂತರ, ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು (Mumbai Police), ಮೆಟ್ರೋ ಪ್ರಾಧಿಕಾರದ ಸಿಬ್ಬಂದಿ, ವಾರ್ಡ್ ಸಿಬ್ಬಂದಿ ಹಾಗೂ 108 ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಸಂಚಾರ ದಟ್ಟನೆ ನಿಯಂತ್ರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಸ್ಥಳದಿಂದ ಮೆಟ್ರೋ ಪಿಲ್ಲರ್ ಅವಶೇಷಗಳನ್ನ ತೆರವುಗೊಳಿಸಲಾಯಿತು.
ಸದ್ಯ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೇ ನಿರ್ಮಾಣ ಕಾರ್ಯದ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನ ಅನುಸರಿಸಲಾಗುತ್ತಿದೆಯೇ ಅನ್ನೋದರ ಬಗ್ಗೆಯೂ ತನಿಖೆ ನಡೆಯುತ್ತಿದೆ.