Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಔಷಧ ಕೊರತೆ ಮತ್ತು ಖಾಲಿ ಹುದ್ದೆ ಭರ್ತಿಗೆ ಆಗ್ರಹ: ಸರ್ಕಾರಕ್ಕೆ ಗಡುವು ನೀಡಿದ ವೈದ್ಯರು.

Spread the love

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ, ಖಾಲಿ ಹುದ್ದೆ ಭರ್ತಿ, ಸಮರ್ಪಕ ಔಷಧ ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಮಾ.11 ರಿಂದ ಮಾ.15ರವರೆಗೆ ಹೊರ ರೋಗಿಗಳ ಸೇವೆ ನಿಲ್ಲಿಸಿ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.

ಅಲ್ಲದೆ, ಎರಡನೇ ಹಂತದ ಹೋರಾಟವಾಗಿ ಮಾ.16 ರಿಂದ ಬೇಡಿಕೆ ಈಡೇರುವವರೆಗೆ ಎಲ್ಲಾ ವೈದ್ಯರು, ಅಧಿಕಾರಿ ಹಾಗೂ ನೌಕರರು ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರಾಗುತ್ತೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ನೀಡಿ ಎಚ್ಚರಿಸಿದೆ.

ಮುಷ್ಕರದ ಹಾದಿ ತುಳಿದಿರುವ ಸರ್ಕಾರಿ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ಅಹವಾಲು ಆಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಭೆ ಕರೆದಿದ್ದರು.

ಆದರೆ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ ವೈದ್ಯಾಧಿಕಾರಿಗಳ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದೆ.

ಶುಕ್ರವಾರ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾದ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳು ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ನಿಗದಿತ ಸಮಯದ ಒಳಗೆ ಬೇಡಿಕೆ ಈಡೇರಿಸದಿದ್ದರೆ ಈ ಮನವಿಪತ್ರವನ್ನೇ ಅನಿರ್ದಿಷ್ಟಾವಧಿ ಮುಷ್ಕರದ ತಿಳಿವಳಿಕೆ ಪತ್ರವಾಗಿ ಪರಿಣಿಸಬೇಕು ಎಂದು ಡಾ.ರವೀಂದ್ರನಾಥ್ ಮೇಟಿ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ಇಲಾಖೆಯಲ್ಲಿ 36,397 ಮಂದಿ ನೌಕರರು, ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದೇವೆ. 6 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಈ ಸಿಬ್ಬಂದಿ ಸಾಕಾಗುವುದಿಲ್ಲ. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಹೇಳಿದರು.

ಬೇಡಿಕೆಗಳೇನು?:

ನಾಲ್ಕು ವರ್ಷದಿಂದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಹಲವು ಬಾರಿ ಲಿಖಿತ, ಮೌಖಿಕವಾಗಿ ಮನವಿ ಸಲ್ಲಿಸಿದರೂ ಈವರೆಗೆ ಮಾಡಿಲ್ಲ ಹೀಗಾಗಿ ಕೂಡಲೇ ತಿದ್ದುಪಡಿ ಮಾಡಬೇಕು. ಜತೆಗೆ 13 ವರ್ಷಗಳಿಂದ ಬಾಕಿ ಇರುವ ಎಲ್ಲಾ ವೃಂದಗಳ ಜೇಷ್ಠತಾಪಟ್ಟಿ ಪರಿಷ್ಕರಿಸಿ ಪ್ರಕಟಿಸಬೇಕು.

ಪರಿಷ್ಕೃತ ಜೇಷ್ಠತಾ ಪಟ್ಟಿ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಸೇವಾ ನಿರತ ನೌಕರರ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಬೇಕು. ವರ್ಗಾವಣೆ ಕಾಯ್ದೆಗೆ ಮಾರ್ಪಾಡು ಮಾಡಬೇಕು.

ಇದರ ನಡುವೆ ಸರ್ಕಾರಿ ವೈದ್ಯರು ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ಆದೇಶಿಸಿದ್ದು, ಇವೆಲ್ಲವೂ ಸರ್ಕಾರಿ ವೈದ್ಯರಿಗೆ ತೀವ್ರ ತೊಂದರೆ ನೀಡುತ್ತಿವೆ. ವೈದ್ಯರೊಂದಿಗೆ ಚರ್ಚಿಸದೆ ಹೊರಡಿಸಿರುವ ಇಂತಹ ಆದೇಶಗಳನ್ನು ಹಿಂಪಡೆಯಬೇಕು.

ಸಮರ್ಪಕ ಔಷಧಿ ಪೂರೈಕೆಗೆ ಆಗ್ರಹ:

ಆಸ್ಪತ್ರೆಗಳಲ್ಲಿ ಕಾಲಕಾಲಕ್ಕೆ ಸಮರ್ಪಕವಾದ ಔಷಧಿಗಳನ್ನು ಸರಬರಾಜು ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ಔಷಧ ಸಬರಾಜು ಸಂಪೂರ್ಣ ವಿಫಲವಾಗಿರುವುದರಿಂದ ರೋಗಿಗಳು ಸರಿಯಾದ ಸಮಯದಲ್ಲಿ ಔಷಧೋಪಚಾರ ಪಡೆಯದೆ ಪರದಾಡುವಂತಾಗಿದೆ. ಹೀಗಾಗಿ ಕೂಡಲೇ ಔಷಧ ಪೂರೈಸಬೇಕು ಎಂದು ಸಂಘ ಆಗ್ರಹಿಸಿದೆ.


Spread the love
Share:

administrator

Leave a Reply

Your email address will not be published. Required fields are marked *