₹2000 ಹಣ ನೀಡಿದ್ರೆ ಕಳೆದುಹೋದ ಬೆರಳು ವಾಪಸ್ ಬರುತ್ತಾ? ಬಿಸಿಯೂಟದ ವೇಳೆ ಘೋರ ಅವಘಡ

ತುಮಕೂರು: ಜಿಲ್ಲೆಯ ತುಮಕೂರು (Tumkuru) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ದುರಂತ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಇದೇ ತಿಂಗಳ 9ರಂದು ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೋರ್ವ ವಿದ್ಯಾರ್ಥಿನಿ ಬಾಗಿಲು ತಳ್ಳಿದ ಆರೋಪ
ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆ ಬಿಸಿಯೂಟಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಆಕೆಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ ಎನ್ನಲಾಗಿದೆ. ಘಟನೆ ನಂತರ ಶಿಕ್ಷಕರು ಸಮರ್ಪಕ ಚಿಕಿತ್ಸೆ ನೀಡದೆ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.

ನ್ಯಾಯ ಕೊಡಿಸುವಂತೆ ಪೋಷಕರ ಆಗ್ರಹ
ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಆದರೆ ಶಿಕ್ಷಕರನ್ನು ಕೇಳಿದಾಗ ಶಾಲೆಯಲ್ಲಿ ಬಾಲಕಿಯ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ನ್ಯಾಯ ದೊರಕಬೇಕು ಎಂದು ವಿದ್ಯಾರ್ಥಿನಿಯ ತಾಯಿ ಅಂಬಿಕಾ ಆಗ್ರಹಿಸಿದ್ದಾರೆ