ಮೆಟ್ರೋ ದರ ಏರಿಕೆ ವಿರುದ್ಧ ‘ಬಿಜೆಪಿ’ ರಣಕಹಳೆ ಸಂಸದ ತೇಜಸ್ವಿ ಸೂರ್ಯ ಪೊಲೀಸರ ವಶಕ್ಕೆ!

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ‘ಖಾಲಿ ಟ್ರಂಕ್’ ಪ್ರತಿಭಟನೆ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಪೂರ್ವಾನುಮತಿ ಪಡೆಯದೆ ರವಿವಾರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರ ನಡುವೆಯೂ ಸೋಮವಾರ ಮತ್ತೆ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಮತ್ತೆ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದರು.


ಬಂಧನಕ್ಕೂ ಮುನ್ನ ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, “ಕೇಂದ್ರ ಸರಕಾರದ ಒತ್ತಡದಿಂದಾಗಿ ಮೆಟ್ರೋ ದರ ಏರಿಕೆಯನ್ನು ಎರಡನೇ ಬಾರಿಗೆ ತಡೆಹಿಡಿಯಲಾಗಿದೆ. ರಾಜ್ಯ ಸರಕಾರ ತನ್ನ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ಉತ್ತಮ ರಸ್ತೆಗಳು, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೌಕರ್ಯಗಳನ್ನು ಒದಗಿಸುವ ಬದಲು ರಾಜ್ಯ ಸರಕಾರ ಜನರ ಮೇಲೆ ಬಲವಂತ ಹಾಗೂ ಬಂಧನದ ಕ್ರಮ ಕೈಗೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೇಳುತ್ತಿರುವುದು ಕೈಗೆಟುಕುವ ಸಾರ್ವಜನಿಕ ಸಾರಿಗೆ ಮಾತ್ರ” ಎಂದು ಅವರು ಹೇಳಿದರು.
ಸೋಮವಾರದಿಂದ ಜಾರಿಗೆ ಬರಲಿದ್ದ ನಮ್ಮ ಮೆಟ್ರೋ ದರಗಳಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.