ವೇಟರ್ ಅವತಾರದಲ್ಲಿ ಬಂದು ಕೈಚಳಕ ತೋರಿದ ಕಳ್ಳ!

ಲೂಧಿಯಾನ: ವೇಟರ್ ವೇಷದಲ್ಲಿ ಮದುವೆ ಮನೆಗೆ ಬಂದ ಕಳ್ಳನೋರ್ವ ಅಲ್ಲಿದ್ದ ಒಂದು ಕೋಟಿ ಹಣವಿದ್ದ ಬ್ಯಾಗ್ ಅನ್ನು ಕದ್ದುಕೊಂಡು ಹೋದಂತಹ ಘಟನೆ ನಡೆದಿದ್ದು, ಮದುವೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದೆ. ಪಂಜಾಬ್ನ ಲೂಧಿಯಾನದ ಪಖೋವಾಲ್ ರಸ್ತೆಯಲ್ಲಿರುವ ಸ್ಟರ್ಲಿಂಗ್ ರೆಸಾರ್ಟ್ನಲ್ಲಿ ಈ ಘಟನೆ ನಡೆದಿದೆ. ಜನವರಿ 18ರಂದು ಈ ಘಟನೆ ನಡೆದಿದ್ಉದ, ಈಗ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಲೂಧಿಯಾನ ನಗರದ ಪ್ರಮುಖ ಆಭರಣ ವ್ಯಾಪಾರಿಯೊಬ್ಬರ ಮದುವೆ ಪೂರ್ವ ನಡೆಯುವ ಶಗುನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯ ಪ್ರಕಾರ ಸಂಜೆ 5 ಗಂಟೆ ಸುಮಾರಿಗೆ ಈ ರೆಸಾರ್ಟ್ನ ಮದುವೆ ಹಾಲ್ ವೇಟರ್ ವೇಷದಲ್ಲಿ ಬಂದಿರುವ ಕಳ್ಳ ಈ ಭಾರಿ ಮೊತ್ತದ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ.

ವೇಟರ್ ವೇಷದಲ್ಲಿ ಬಂದು 1 ಕೋಟಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕದ್ದು ಪರಾರಿ:
ಸಿಸಿಟಿವಿ ದೃಶ್ಯಗಳಲ್ಲಿ ಕಾಣುವಂತೆ ಆತ ವೈಟರ್ಗಳ ಸಮವಸ್ತ್ರವಾದ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಮದುವೆ ಮನೆಗೆ ಬಂದಿದ್ದಾನೆ. ಸ್ಥಳದಲ್ಲಿ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಿದ ಆತ, ಕುಟುಂಬ ಸದಸ್ಯರು ಮದುವೆಯ ಆಚರಣೆಗಳಲ್ಲಿ ಬ್ಯುಸಿಯಾಗಿರುವುದನ್ನು ನೋಡಿ ವಧುವಿನ ಕುಟುಂಬಕ್ಕೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಚೀಲವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾನೆ. ಹಿಂದಿ ಮಾಧ್ಯಮ ದೈನಿಕ್ ಭಾಸ್ಕರ್ ವರದಿಯ ಪ್ರಕಾರ ಆ ಚೀಲದಲ್ಲಿ ಸುಮಾರು 400 ಗ್ರಾಂ ಚಿನ್ನದ ಆಭರಣಗಳು ಹಾಗೂ ‘ಶಗುನ್’ (ನಗದು ಉಡುಗೊರೆಗಳು) ತುಂಬಿದ್ದ ಹಲವಾರು ಲಕೋಟೆಗಳು ಇದ್ದವು ಎಂದು ತಿಳಿದು ಬಂದಿದೆ.
ನಗದು ಸೇರಿದಂತೆ ಕದ್ದ ವಸ್ತುಗಳ ಒಟ್ಟು ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಈ ಘಟನೆ ನಡೆದಿದೆ ಎಂದು ವಧುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮದುವೆಸಮಾರಂಭಕ್ಕಾಗಿ ವಧುವಿನ ಕುಟುಂಬ ಅಮೃತಸರದಿಂದ ಲೂಧಿಯಾನಗೆ ಬಂದಿತ್ತು.

ಈ ಅಮೂಲ್ಯ ವಸ್ತುಗಳಿದ್ದ ಚೀಲವನ್ನು ವಧುವಿನ ತಂದೆಯೇ ಹಿಡಿದುಕೊಂಡಿದ್ದರು. ಆದರೆ ಮದುವೆಯ ಆಚರಣೆಗಳ ನಡುವೆ ಅವರು ಸ್ವಲ್ಪ ಸಮಯದವರೆಗೆ ಚೀಲವನ್ನು ಕುರ್ಚಿಯ ಮೇಲೆ ಇಟ್ಟಿದ್ದಾರೆ ಇದೇ ಸಮಯವನ್ನು ನೋಡಿ ಕಳ್ಳ ಹೊಂಚು ಹಾಕಿದ್ದು, ಬೆಲೆ ಬಾಳುವ ವಸ್ತುವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾನೆ. ಬ್ಯಾಗ್ ಕಾಣೆಯಾಗಿರುವುದು ತಿಳಿದ ನಂತರ, ಕುಟುಂಬ ಸದಸ್ಯರು ರೆಸಾರ್ಟ್ನ ವ್ಯವಸ್ಥಾಪಕರಿಗೆ ದೂರು ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಕೇಳಿಕೊಂಡರು. ನಂತರ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ವೇಟರ್ ವೇಷದಲ್ಲಿದ್ದ ಯುವಕನೋರ್ವ ಮದುವೆ ಮನೆಗೆ ಬಂದುಬ್ಯಾಗ್ನೊಂದಿಗೆ ಸ್ಥಳದಿಂದ ಹೊರಹೋಗುವುದು ಸೆರೆಯಾಗಿದೆ.
ಸದರ್ ಪೊಲೀಸ್ ಠಾಣೆಯ ಎಸ್ಎಚ್ಒ ಜಗದೇವ್ ಸಿಂಗ್ ನಂತರ ಸ್ಥಳಕ್ಕೆ ಆಗಮಿಸಿ ಈ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.