ಪೊಲೀಸ್ ಠಾಣೆಯಲ್ಲೇ ಮೊಬೈಲ್ ಕದ್ದ ಖದೀಮ- ಸಿಸಿಟಿವಿಯಲ್ಲಿ ಸೆರೆಯಾದ ಕೈಚಳಕ

ಗದಗ: ಸರಗಳ್ಳತನ ಮಾಡುವವರು, ಮೊಬೈಲ್ ಕಳ್ಳತನ ಮಾಡುವವರಿಗೆ ಪೊಲೀಸರನ್ನು ಕಂಡರೆ ಭಯ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಪೊಲೀಸ್ ಠಾಣೆಯಲ್ಲಿಯೇ ಪೊಲೀಸರ ಎದುರೇ ಅವರದ್ದೇ ಮೊಬೈಲ್ ಕದ್ದಿದ್ದಾನೆ. ಈ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು, ಗದಗ ಶಹರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮುಲ್ಲಾ ಎನ್ನುವ ವ್ಯಕ್ತಿಯೇ ಈ ಕಳ್ಳತನ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಮಾತನಾಡುತ್ತಿದ್ದ ವೇಳೆ ಅವರ ಮೊಬೈಲ್ ಕದ್ದಿದ್ದಾನೆ. ಈ ಘಟನೆ ಸ್ಟೇಷನ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದನು. ಬಿಲ್ ಕೊಡದ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್ ಗೆ ಬಂದಿದ್ದ ಎಂದು ಹೇಳಲಾಗಿದೆ. ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮೊಬೈಲ್ ಕದ್ದಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.