ಗಲ್ಫ್‌ನಿಂದ ಡೀಸೆಲ್ ಸ್ಮಗ್ಲಿಂಗ್: ಅಕ್ರಮ ಜಾಲ ಭೇದಿಸಿದ ಅಧಿಕಾರಿಗಳು!

ಬೆಳಗಾವಿ: ಚಿನ್ನದಂತೆ ಗಲ್ಫ್ ರಾಷ್ಟ್ರಗಳಿಂದ ರಾಜ್ಯಕ್ಕೆ ಡೀಸೆಲ್ ಸ್ಮಗ್ಲಿಂಗ್ (Diesel Smuggling) ಮಾಡ್ತಿದ್ದ ಅಕ್ರಮ ಜಾಲವೊಂದು ಸಿಕ್ಕಿಬಿದ್ದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋಟಿ ಕೋಟಿ ತೆರಿಗೆ ವಂಚಿಸುತ್ತಿದ್ದ ಖದೀಮರು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ (MalaMaruti Police Station) ಮಿಂಚಿನ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಬೆಳಗಾವಿ ಪೊಲೀಸರು ಅಕ್ರಮ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ (Oil Tanker) ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ

ಹೌದು. ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ತೈಲ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಾಳಮಾರುತಿನಗರ ಪೊಲೀಸರ ತಂಡ, ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಪೆಟ್ರೋಲಿಯಂ ಉತ್ಪನ್ನಗಳು ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಕೂಡಲೇ 17 ಲಕ್ಷ ರೂ. ಮೌಲ್ಯದ 17,000 ಲೀಟರ್ ಡೀಸೆಲ್ ಮತ್ತು ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ
ಇನ್ನೂ ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಲ್ಫ್ ರಾಷ್ಟ್ರಗಳಿಂದ ಅಕ್ರಮವಾಗಿ ತೈಲ ಸಾಗಾಟ ಮಾಡುತ್ತಿದ್ದದ್ದು ಗೊತ್ತಾಗಿದೆ
ವಿಚಾರಣೆ ವೇಳೆ ಸ್ಮಗ್ಲಿಂಗ್ ಜಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನದವರು ಇರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಮಗ್ಲರ್‌ಗಳ ಬೆನ್ನುಬಿದ್ದಿದ್ದಾರೆ