ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಮಂದಿ ಅರೆಸ್ಟ್

ಡೆಹ್ರಾಡೂನ್: ಉತ್ತರಾಖಂಡ ಪೊಲೀಸರು ನಡೆಸುತ್ತಿರುವ ‘ಆಪರೇಷನ್ ಕಾಲನೇಮಿ’ (Operation Kalnemi) ಎಂಬ ವಿಶೇಷ ಕಾರ್ಯಾಚರಣೆಯ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 511 ಜನರನ್ನು ಬಂಧಿಸಲಾಗಿದೆ. ಈ ಬಂಧಿತರಲ್ಲಿ 19 ಮಂದಿ ಬಾಂಗ್ಲಾದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಧರ್ಮದ ಹೆಸರಿನಲ್ಲಿ ವಂಚನೆ ಮಾಡುವವರು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ಮತ್ತು ಅಕ್ರಮವಾಗಿ ರಾಜ್ಯದಲ್ಲಿ ವಾಸಿಸುತ್ತಿರುವವರನ್ನು ಪತ್ತೆಹಚ್ಚಲು ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಹರಿದ್ವಾರ, ಡೆಹ್ರಾಡೂನ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ಪೊಲೀಸರು ಸುಮಾರು 4,800ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಬಂಧಿತ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 10 ಮಂದಿಯನ್ನು ಈಗಾಗಲೇ ಗಡೀಪಾರು ಮಾಡಲಾಗಿದ್ದು, ಉಳಿದವರ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ.

ಈ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, “ಇದು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧದ ಕ್ರಮವಲ್ಲ. ದೇವಭೂಮಿಯ ಪವಿತ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಉದ್ದೇಶ. ನಕಲಿ ಗುರುತಿನ ಚೀಟಿ ಬಳಸಿ ಅಕ್ರಮವಾಗಿ ವಾಸಿಸುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.