Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

163 ಭೂಕುಸಿತ ಪ್ರದೇಶಗಳ ಪತ್ತೆ; ಅನಾಹುತ ತಡೆಗೆ ಸರ್ಕಾರದಿಂದ ₹66.47 ಕೋಟಿ ಅನುದಾನ

Spread the love

ಚಿಕ್ಕಮಗಳೂರು: ಮಳೆಗಾಲದಲ್ಲಿ ಭೂಕುಸಿತ ಸಂಭವಿಸಬಹುದಾದ 163 ಪ್ರದೇಶಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಗುರುತಿಸಿದೆ. ಇದರಲ್ಲಿ ಗುಡ್ಡದ ತಪ್ಪಲಿನ ಹಳ್ಳಿಗರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವಂತಹ ಪ್ರದೇಶಗಳು ಇವೆ.

ಭೂಕುಸಿತದಂತಹ ಅನಾಹುತಗಳನ್ನ ತಡೆಯಲು ರಾಜ್ಯ ಸರ್ಕಾರ 66.47 ಕೋಟಿ ರೂ. ಹಣವನ್ನ ಬಿಡುಗಡೆ ಮಾಡಿದೆ. 2019 ರಿಂದ ಪ್ರತಿವರ್ಷ ನಿರಂತರವಾಗಿ ಧಾರಾಕಾರ ಮಳೆಯಾಗಿದೆ. ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರಕರಣಗಳ ಆಧಾರದ ಮೇಲೆ ಜಿಲ್ಲಾಡಳಿತ 163 ದುರ್ಬಲ ಪ್ರದೇಶಗಳೆಂದು ಗುರುತು ಮಾಡಿದೆ. ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯು ನೀಡಿರುವ ಸಲಹೆ ಮೇರೆಗೆ ಜನವಸತಿ ಮತ್ತು ರಸ್ತೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ 25 ಸ್ಥಳಗಳನ್ನ ಜಿಲ್ಲಾಡಳಿತ ಪ್ರತ್ಯೇಕವಾಗಿ ಪಟ್ಟಿ ಮಾಡಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಸರ್ವೇ ಮಾಡಿದ್ದ ಜಿ.ಎಸ್.ಐ. ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟಿ ಹಾಗೂ ಬಾಬಾಬುಡನ್‌ಗಿರಿ ಭಾಗದಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ ಎಂದು ವರದಿ ನೀಡಿತ್ತು. ಮಣ್ಣಿನ ಸವಕಳಿ, ಇಳಿಜಾರಿನ ಪ್ರದೇಶ, ಮಳೆಯ ಪ್ರಮಾಣ, ಗಾಳಿಯ ವೇಗ, ಅಂತರ್ಜಲ, ನೀರಿನ ಹರಿವು ಕುರಿತು ಅಧ್ಯಯನ ನಡೆಸಲಾಗಿತ್ತು. ಮುಳ್ಳಯ್ಯನಗಿರಿ, ಬಾಬಾ ಬುಡನ್‌ ಗಿರಿ ರಸ್ತೆ ಮತ್ತು ಚಾರ್ಮಾಡಿ ಘಾಟ್ ವಿಭಾಗದಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ. ಕಡಿದಾದ ಇಳಿಜಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಕಾಡಿನಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ರೀತಿಯ ಅಪಾಯಗಳು ಹೆಚ್ಚಾಗುತ್ತಿವೆ. ಅತಿಯಾದ ಮಳೆ, ‌ಅಂತರ್ಜಲದ ಒತ್ತಡ ನಿರ್ವಹಣೆ ಮಾಡದಿರುವುದು, ಗುಡ್ಡಗಳನ್ನ ಕಡಿದು ಅಗೆದು ರಸ್ತೆ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂದು ಜಿಎಸ್‌ಐ ವರದಿ ನೀಡಿತ್ತು.

ಇದೀಗ, ರಾಜ್ಯ ಸರ್ಕಾರ 66 ಕೋಟಿ 47 ಲಕ್ಷ ರೂ. ಹಣವನ್ನ ಎರಡು ಹಂತದಲ್ಲಿ ಮಂಜೂರು ಮಾಡಿದೆ. ಜಿ.ಎಸ್.ಐ. ನೀಡಿರುವ ಸಲಹೆಗಳ ‌ಆಧಾರದ ಮೇಲೆ ಭೂಕುಸಿತವನ್ನ ತಡೆಗಟ್ಟಲು ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ನೀರಿನ ಹರಿವು ಹೆಚ್ಚಿರುವ ಕಡೆಗಳಲ್ಲಿ ಗುಡ್ಡಗಳನ್ನು ಕಡಿದು ಅಥವಾ ಕೊರೆದು ರಸ್ತೆ ನಿರ್ಮಾಣ ಮಾಡಿರುವ ಕಡೆಗಳಲ್ಲಿ ಹೆಚ್ಚಾಗಿ ಕುಸಿತಗಳಾಗಿವೆ. ಈಗಾಗಲೇ ದುರ್ಬಲವಾಗಿರುವ ಇಳಿಜಾರು ರಸ್ತೆಗಳ ಬದಿಗಳಲ್ಲಿ ಗೇಬಿಯನ್ ರೀತಿಯ ಗೋಡೆ ನಿರ್ಮಾಣವಾಗಬೇಕು. ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿದರೆ ಅವುಗಳಲ್ಲಿ ನೀರು ಹರಿದು ಹೋಗುವಂತೆ ರಂಧ್ರಗಳಿರಬೇಕು. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ರಸ್ತೆಗೆ ಹರಿಯುವುದನ್ನ ತಡೆಯಬೇಕು ಎಂದು ಜಿ.ಎಸ್.ಐ. ಸಲಹೆ ನೀಡಿತ್ತು. ಅದರಂತೆಯೇ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಹರಿಯುವ ನೀರಿನಿಂದ ಆಗುವ ಮಣ್ಣಿನ ಸವೆತ ನಿಯಂತ್ರಣ, ಇಳಿಜಾರುಗಳಲ್ಲಿ ಕಾಡು ರಕ್ಷಣೆ, ಆಳವಾಗಿ ಬೇರು ಬೀಡುವ ಜಾತಿಯ ಸಸ್ಯಗಳನ್ನು ಬೆಳೆಸುವ ಮೂಲಕ ಮಣ್ಣಿನ ಸವಕಳಿ ಹಾಗೂ ಕುಸಿತ ತಡೆಯಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಗುಡ್ಡಕುಸಿತ ಪ್ರದೇಶಗಳನ್ನು ಗುರುತಿಸಿದ್ದ ಜಿ.ಎಸ್‌.ಐ 5 ಕಡೆಗಳಲ್ಲಿ ಜನವಸತಿ ಸ್ಥಳಾಂತರಕ್ಕೂ ಶಿಫಾರಸು ಮಾಡಿತ್ತು. ಅದರಂತೆ 5 ಸ್ಥಳಗಳಲ್ಲಿ ಜನವಸತಿ ಸ್ಥಳಾಂತರಕ್ಕೂ ಜಿಲ್ಲಾಡಳಿತ ಯೋಚಿಸಿದೆ.


Spread the love
Share:

administrator

Leave a Reply

Your email address will not be published. Required fields are marked *