ಉಡುಪಿ ಕೃಷ್ಣ ಮಠಕ್ಕೆ ಇಂದು ‘ಪಾರ್ಥಸಾರಥಿ ಸುವರ್ಣ ರಥ’ ಸಮರ್ಪಣೆ

ಉಡುಪಿ: ತಮ್ಮ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಸಂಕಲ್ಪಿಸಿದಂತೆ ಪಾರ್ಥಸಾರಥಿ ಸುವರ್ಣ ರಥದ ಸಮರ್ಪಣೆ ನಾಳೆ (ಡಿ.26) ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ತಿಳಿಸಿದ್ದಾರೆ.


ಚತುರ್ಥ ಪರ್ಯಾಯದ ಅಂತಿಮ ಘಟ್ಟ ತಲುಪಿರುವ ಪುತ್ತಿಗೆಶ್ರೀಗಳು ಗೀತಾಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ತಾವು ನಡೆಸಿದ ಕೋಟಿ ಗೀತ ಲೇಖನ ಯಜ್ಞದ ಸ್ಮರಣಾರ್ಥವಾಗಿ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥವನ್ನು ಅರ್ಪಣೆ ಮಾಡುತ್ತಿರುವುದಾಗಿ ತಿಳಿಸಿದರು.
ಶುಕ್ರವಾರ ಅಪರಾಹ್ನ 3:30ಕ್ಕೆ ನಗರದ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಮಂತ್ರಾಲಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸುವರ್ಣ ರಥವನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ತರಲಾಗುವುದು. ಬಳಿಕ ರಾಜಾಂಗಣದಲ್ಲಿ ಇದರ ಸಮರ್ಪಣೆ ನಡೆಯಲಿದೆ ಎಂದು ಪುತ್ತಿಗೆಶ್ರೀಗಳು ತಿಳಿಸಿದರು.

ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವ ಡಿ.27ರ ಸಂಜೆ 6 ಗಂಟೆಗೆ ನಡೆಯಲಿದೆ. ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವರು. ಬಳಿಕ ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ. ಮುಂದೆ ಪಾರ್ಥಸಾರಥಿ ಸುವರ್ಣ ರಥವನ್ನು ಶ್ರೀಕೃಷ್ಣ ಮಠದ ಸುತ್ತು ಪೌಳಿಯಲ್ಲಿ ರಥೋತ್ಸವಕ್ಕೆ ಬಳಸಲಾಗುವುದು ಎಂದೂ ಅವರು ಹೇಳಿದರು.