ಬಂಟ್ವಾಳದಲ್ಲಿ ವಿದ್ಯಾರ್ಥಿ ನಾಪತ್ತೆ: ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ,ಮಾರ್ಚ್ 12ಕ್ಕೆ ವಿಚಾರಣೆ

ಬಂಟ್ವಾಳ: ಮಂಗಳೂರು ಹೊರವಲಯದ ಫರಂಗಿಪೇಟೆಯಿಂದ ಫೆ.25ರಂದು ನಾಪತ್ತೆಯಾಗಿರುವ ದಿಗಂತ್ ಎಂಬ ಹುಡುಗನನ್ನು ಹುಡುಕಿಕೊಡುವಂತೆ ಕೋರಿ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ. ವಕೀಲರಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಮತ್ತು ಅಖಿಲೇಶ್ವರಿ ಅವರು ಈಗಾಗಲೇ ಈ ಅರ್ಜಿ ಸಲ್ಲಿಸಿದ್ದಾರೆ.

ಹನ್ನೊಂದು ದಿನಗಳಾದರೂ ದಿಗಂತ್ ಸುಳಿವಿಲ್ಲದ ಹಿನ್ನೆಲೆಯಲ್ಲಿ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿರುವುದು ಒಂದೆಡೆಯಾದರೆ, ನಾಪತ್ತೆಯಾಗಿರುವ ಮಗನನ್ನು ಎಲ್ಲಿದ್ದರೂ ಹುಡುಕಿಕೊಡಿಸುವಂತೆ ತಂದೆ ಪದ್ಮನಾಭ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ರಾಜ್ಯ ಸರಕಾರ, ಡಿಜಿಪಿ, ಎಸ್ಪಿ, ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರನ್ನು ಅರ್ಜಿಯಲ್ಲಿ ಉದ್ದೇಶಿಸಲಾಗಿದೆ. ಮುಂದಿನ ವಿಚಾರಣೆಯನ್ನು ಕೋರ್ಟ್ ಮಾರ್ಚ್ 12ಕ್ಕೆ ಮುಂದೂಡಿದೆ.
ದಿಂಗತ್ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಈತ ಮನೆಯಿಂದ ಹೋದವನು ಎಲ್ಲಿಗೆ ಹೋದ ಎಂಬ ಕುರಿತು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ವಿದ್ಯಾರ್ಥಿ ನಾಪತ್ತೆ ಪ್ರಕರಣದ ಬಳಿಕ ಫರಂಗಿಪೇಟೆಯಲ್ಲಿ ಪೊಲೀಸರಿಗೆ ಒತ್ತಡ ಹೇರುವ ಸಲುವಾಗಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು.
ಇದಾದ ಬಳಿಕ ತನಿಖೆ ಚುರುಕುಗೊಂಡಿತ್ತು. ಆತನ ಮೊಬೈಲ್ ಸಂದೇಶ, ಚಾಟ್ ಹಿಸ್ಟರಿಗಳನ್ನು ಕಲೆ ಹಾಕಿ ಇದೇನಾದರೂ ಪತ್ತೆ ಕಾರ್ಯಕ್ಕೆ ಸಹಾಯವಾಗುತ್ತಾ ಎಂಬುದನ್ನು ನೋಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರೇ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.