Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಠ್ಯದಲ್ಲಿ ಭಗವದ್ಗೀತೆ ಬೋಧನೆಗೆ ಹೆಚ್.ಡಿ.ಕೆ ಒತ್ತು: ಮೌಲ್ಯಯುತ ಸಮಾಜಕ್ಕಾಗಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ

Spread the love

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಪುನರುಚ್ಚರಿಸಿದರು.

ನವದೆಹಲಿಯಲ್ಲಿ ಮೈಸೂರಿನ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು

ಭಗವದ್ಗೀತೆಯನ್ನು ಬೋಧಿಸಬೇಕು ಎಂದು ನಾನು ಹೇಳಿದ್ದು ರಾಜಕೀಯ ಉದ್ದೇಶ ಅಥವಾ ಯಾವುದೇ ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ. ಉತ್ತಮ ಸಮಾಜ ನಿರ್ಮಾಣ ಮಾಡುವ ಅಗತ್ಯದ ದೃಷ್ಟಿಯಿಂದ ಹೇಳಿದ್ದೇನೆ ಎಂದು ಒತ್ತಿ ಹೇಳಿದರು.

ಭಗವದ್ಗೀತೆಯ ಉದಾತ್ತ, ಶ್ರೇಷ್ಠ ಮೌಲ್ಯಗಳ ಬಗ್ಗೆ ಹೊಸದಾಗಿ ತಿಳಿಹೇಳುವ ಅಗತ್ಯವಿಲ್ಲ. ಆದರೆ ಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಿಃಪತನ ಆಗುತ್ತಿರುವ ಸಂದರ್ಭದಲ್ಲಿ ಗೀತೆಯ ಅಗತ್ಯ ಇನ್ನೂ ಹೆಚ್ಚಿದೆ. ಮಾನವ ಕುಲಕ್ಕೆ ಕೃಷ್ಣನ ಉಪದೇಶವು ದಾರಿದೀಪವಾಗಿದೆ. ಹೀಗಾಗಿ ಮಕ್ಕಳಿಗೆ ಬೋಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದೇನೆ. ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವಂತೆ ಕೋರಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರವನ್ನು ಕೂಡ ಬರೆದಿದ್ದೇನೆ. ಅದನ್ನೇ ಕೆಲವರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ನುಡಿದರು.

ನಮಗೆ ಎಲ್ಲವೂ ಇದೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯುತ್ತಿದ್ದೇವೆ. ಆದರೆ ಮೌಲ್ಯಗಳ ವಿಷಯಕ್ಕೆ ಬಂದಾಗ ಪಾತಾಳಕ್ಕೆ ಹೋಗುತ್ತಿದ್ದೇವೆ. ಯಾಕೆ ಹೀಗೆ ಆಗುತ್ತಿದೆ ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇವತ್ತು ಯಾರೇ ಆದರೂ ನೆಮ್ಮದಿಯಾಗಿ ನಿದ್ರೆ ಮಾಡುವ ಪರಿಸ್ಥಿತಿ ಇಲ್ಲ. ಅಂಥ ಪ್ರಾಮಾಣಿಕತೆಯನ್ನು ಯಾರೂ ಹೊಂದಿಲ್ಲ. ಹಾಗಾದರೆ ಮುಂದಿನ ತಲೆಮಾರಿಗೆ ಏನು ಕೊಡಬೇಕು ಎಂಬುದನ್ನು ಪೋಷಕರು ಕೂಡ ತೀರ್ಮಾನ ಮಾಡಬೇಕು. ಮಾನವೀಯ ಮೌಲ್ಯಗಳು, ತಾಯಿ ಹೃದಯ ಎಲ್ಲರಿಗೂ ಅಗತ್ಯ. ಈ ಮೌಲ್ಯಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ವಿನಂತಿಸಿದರು.

ಕುವೆಂಪು ಅವರಿಗೆ ಭಾರತ ರತ್ನ ಸಿಗಲಿ:
ಕುವೆಂಪು ಅವರು ರಾಷ್ಟ್ರಕವಿಯಷ್ಟೇ ಅಲ್ಲ, ಅವರು ವಿಶ್ವಕವಿ. ಮನುಕುಲದ ಒಳಿತಿಗಾಗಿ ಸಾಹಿತ್ಯ ರಚಿಸಿದ ಅವರು, ಯುಗದ ಕವಿಯೂ ಆಗಿದ್ದಾರೆ. ಅಂಥ ಶ್ರೇಷ್ಠರಿಗೆ ಭಾರತ ರತ್ನ ಸಿಗಬೇಕು. ಕುವೆಂಪು ಅವರ ಸಾಹಿತ್ಯವನ್ನು ನಾನು ಓದಿದ್ದೇನೆ. ಮುಖ್ಯವಾಗಿ ಅವರ ಎರಡು ಕಾದಂಬರಿಗಳ ಜೊತೆಗೆ, ಅವರ ಆತ್ಮಕಥನ `ನೆನಪಿನ ದೋಣಿಯಲ್ಲಿ’ ಶ್ರದ್ಧೆಯಿಂದ ಓದಿದ್ದೇನೆ. ಆ ಕೃತಿಯನ್ನು ಕುವೆಂಪು ಅವರು ಹೃದಯದಿಂದ ಬರೆದಿದ್ದಾರೇನೋ ಅನ್ನುವಷ್ಟು ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಮುಕ್ತಿದಾನಂದ ಜೀ ಮಹಜಾಜ್ ಅವರು, ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿಗಳು, ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರುಗಳು ದಿವು ಸಾನ್ನಿಧ್ಯ ವಹಿಸಿದ್ದರು.

ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸದರಾದ ಡಾ.ಸಿ.ಎನ್. ಮಂಜುನಾಥ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ನಾಗರಾಜ್, ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.ರಾಮು ಮುಂತಾದವರು ಉಪಸ್ಥಿತರಿದ್ದರು


Spread the love
Share:

administrator

Leave a Reply

Your email address will not be published. Required fields are marked *