ಸಾವಿನಲ್ಲೂ ಸಾರ್ಥಕತೆ ಮೆರೆದ ಸಾಗತವಳ್ಳಿ ಲೋಕೇಶ್: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ, ಹಲವರಿಗೆ ಮರುಜನ್ಮ

ಹಾಸನ : ಚನ್ನರಾಯಪಟ್ಟಣ ತಾಲೂಕಿನ ಸಾಗತವಳ್ಳಿ ಗ್ರಾಮದ ಲೋಕೇಶ್ (35) ಎಂಬ ಯುವಕ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ (Brain Dead) ಬಳಿಕ, ಅವರ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಹಲವು ಜನರ ಬಾಳಿಗೆ ಬೆಳಕಾಗಿದ್ದಾರೆ. ಡಿಸೆಂಬರ್ 11ರಂದು ದಿನಸಿ ತರಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಲೋಕೇಶ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಮಗನನ್ನು ಉಳಿಸಿಕೊಳ್ಳಲು ಪೋಷಕರು ಸಾಲಸೋಲ ಮಾಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆವರೆಗೆ ಕರೆದೊಯ್ದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್ ಅವರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಈ ಸಂಕಷ್ಟದ ಸಮಯದಲ್ಲಿಯೂ ದೃತಿಗೆಡದ ಪೋಷಕರು, “ತಮ್ಮ ಮಗನ ದೇಹ ಮಣ್ಣಾಗುವ ಬದಲು ಇತರರ ಜೀವ ಉಳಿಸಲಿ” ಎಂಬ ಉದಾತ್ತ ಉದ್ದೇಶದಿಂದ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಮನುಕುಲಕ್ಕೆ ಮಾದರಿಯಾಗಿದ್ದಾರೆ.


ಲೋಕೇಶ್ ಅವರ ಹೃದಯ, ಲಿವರ್ ಮತ್ತು ಕಣ್ಣುಗಳನ್ನು ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಪಡೆದುಕೊಂಡಿದ್ದು, ಅವರ ಜೀವಂತ ಹೃದಯವನ್ನು ಹಾಸನದ ಹಿಮ್ಸ್ ಆಸ್ಪತ್ರೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ‘ಝೀರೋ ಟ್ರಾಫಿಕ್’ ವ್ಯವಸ್ಥೆಯ ಮೂಲಕ ಅತ್ಯಂತ ವೇಗವಾಗಿ ರವಾನಿಸಲಾಯಿತು. ಈ ಹಿಂದೆ ಬೆಂಗಳೂರಿನಲ್ಲಿ ವಾಸವಿದ್ದ ಲೋಕೇಶ್ ಕೊರೊನಾ ಸಮಯದಲ್ಲಿ ಊರಿಗೆ ಮರಳಿ ಕೃಷಿ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದರು. ಒಂದು ಕ್ಷಣದ ಅಪಘಾತ ಅವರ ಬದುಕನ್ನು ಕಸಿದುಕೊಂಡರೂ, ಲೋಕೇಶ್ ಅವರ ಸಾವಿನ ನಡುವೆಯೂ ಅವರ ಅಂಗಾಂಗಗಳು ಇಂದು ಹಲವು ರೋಗಿಗಳ ಪಾಲಿಗೆ ಸಂಜೀವಿನಿಯಾಗಿವೆ. ಹಾಸನ ಹಿಮ್ಸ್ ಇತಿಹಾಸದಲ್ಲೇ ಇದು ಒಂದು ವಿಶಿಷ್ಟ ಸಾಧನೆಯಾಗಿದ್ದು, ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಮನ್ವಯತೆಯಿಂದಾಗಿ ಈ ಜೀವ ಉಳಿಸುವ ಮಹತ್ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

