🐾 ಚಾಮರಾಜನಗರ: ಹನೂರಿನಲ್ಲಿ ಅಮಾನವೀಯ ಕೃತ್ಯ; ಪ್ರೀತಿಯಿಂದ ಸಾಕಿದ್ದ ‘ಜಿಮ್ಮಿ-ಪಮ್ಮಿ’ ಶ್ವಾನಗಳಿಗೆ ವಿಷವಿಕ್ಕಿ ಕ್ರೂರ ಹತ್ಯೆ, ಮಾಲೀಕಳ ಆಕ್ರಂದನ!

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಕಾವ್ಯ ಎಂಬ ಯುವತಿ ತನ್ನ ಮನೆಯ ಸದಸ್ಯರಂತೆ ಅತಿ ಪ್ರೀತಿಯಿಂದ ಸಾಕಿದ್ದ ‘ಜಿಮ್ಮಿ’ ಮತ್ತು ‘ಪಮ್ಮಿ’ ಎಂಬ ಎರಡು ಶ್ವಾನಗಳನ್ನು ಕಿಡಿಗೇಡಿಗಳು ಆಹಾರದಲ್ಲಿ ವಿಷವಿಕ್ಕಿ ಬಲಿ ಪಡೆದಿದ್ದಾರೆ. ಕಾವ್ಯ ಅವರು ಕಾರ್ಯನಿಮಿತ್ತ ಮಂಗಳೂರಿಗೆ ತೆರಳಿದ್ದ ಸಂದರ್ಭವನ್ನು ಸಂಚು ರೂಪಿಸಲು ಬಳಸಿಕೊಂಡ ದುಷ್ಕರ್ಮಿಗಳು, ತಡರಾತ್ರಿ ಶ್ವಾನಗಳ ಆಹಾರದಲ್ಲಿ ವಿಷ ಬೆರೆಸಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಮುಂಜಾನೆ ನೆರೆಮನೆಯವರು ಶ್ವಾನಗಳು ಮೃತಪಟ್ಟಿರುವುದನ್ನು ಗಮನಿಸಿ ಮಾಹಿತಿ ನೀಡಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಪ್ರೀತಿಯ ಸಾಕುಪ್ರಾಣಿಗಳ ಸಾವಿನ ಸುದ್ದಿ ಕೇಳಿ ಬೆಚ್ಚಿಬಿದ್ದ ಮಾಲೀಕಿ ಕಾವ್ಯ ತಕ್ಷಣವೇ ಊರಿಗೆ ಮರಳಿ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹನೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಉದ್ದೇಶಪೂರ್ವಕ ಹಾಗೂ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೂಕಪ್ರಾಣಿಗಳ ಪ್ರಾಣ ತೆಗೆದ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ; ಪ್ರಾಣಿಪ್ರಿಯರ ವಲಯದಲ್ಲಿ ಈ ಘಟನೆಯು ತೀವ್ರ ಸಂಚಲನ ಮೂಡಿಸಿದ್ದು, ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಕಟ್ಟುನಿಟ್ಟಿನ ತನಿಖೆ ನಡೆಯುತ್ತಿದೆ.

