ಲಂಡನ್ನಲ್ಲಿ ಜೈಶಂಕರ್ ಮೇಲೆ ಖಲಿಸ್ತಾನಿ ದಾಳಿ ಯತ್ನ, ತ್ರಿವರ್ಣ ಧ್ವಜಕ್ಕೆ ಅವಮಾನ

ಲಂಡನ್ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಖಲಿಸ್ತಾನಿ ಉಗ್ರ ನಿಂದಿಸಿ, ಅವರ ಕಾರಿನ ಮೇಲೆ ದಾಳಿ ಮಾಡಿ, ಭಾರತದ ಧ್ವಜವನ್ನು ಹರಿದು ಅವಮಾನಿಸಿದ್ದಾರೆ.

ಲಂಡನ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮೇಲೆ ಖಲಿಸ್ತಾನಿಗಳು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಲಂಡನ್ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜೈಶಂಕರ್ ಅವರನ್ನು ಉಗ್ರರು ಸುತ್ತುವರೆದು ದಾಳಿ ಮಾಡಲು ಪ್ರಯತ್ನಿಸಿದರು. ಈ ಘಟನೆಯ ವಿಡಿಯೋ ಕೂಡ ಹೊರಬಂದಿದ್ದು, ಇದರಲ್ಲಿ ಖಲಿಸ್ತಾನಿ ಬೆಂಬಲಿಗರ ಗುಂಪು ಕೈಯಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ.
ಸ್ಥಳದಲ್ಲಿ ಖಲಿಸ್ತಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಆನ್ಲೈನ್ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ಅವರ ಕಾರಿನ ಬಳಿಗೆ ಬಂದು ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದನ್ನು ತೋರಿಸಲಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಚರ್ಚೆಯಲ್ಲಿ ಭಾಗವಹಿಸಿದ್ದ ಸ್ಥಳದ ಹೊರಗೆ ಹಲವಾರು ಖಲಿಸ್ತಾನ್ ಪರ ಬೆಂಬಲಿಗರು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.