ಮದ್ಯದ ಹೋಮ್ ಡೆಲಿವರಿ ಚರ್ಚೆ: ವಿಧಾನಸಭೆಯಲ್ಲಿ ಸ್ವಾರಸ್ಯಕರ ವಾಗ್ವಾದ

ಬೆಳಗಾವಿ: ಮದ್ಯವನ್ನು(Liquor) ಹೋಮ್ ಡೆಲಿವರಿ (Home Delivery) ಕೊಡುವ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರಶ್ನೋತ್ತರ ಕಲಾಪದ ವೇಳೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟದ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಪ್ರಶ್ನೆ ಕೇಳಿದ್ರು.


ನಿಮಗೆ ಟಾರ್ಗೆಟ್ ಫಿಕ್ಸ್ ಮಾಡಬೇಕು ಎಂದಿದ್ದರೆ ಲೈಸೆನ್ಸ್ ಕೊಟ್ಟುಬಿಡಿ ಎಂದು ಸುರೇಶ್ ಬಾಬು ವ್ಯಂಗ್ಯವಾಡಿದರು. ಆಗ ಶಾಸಕ ಸುರೇಶ್ ಕುಮಾರ್ ಮಧ್ಯಪ್ರವೇಶ ಮಾಡಿ, ಸ್ವಿಗ್ಗಿ, ಝೋಮಾಟೋ ಮೂಲಕ ಮಾರಾಟಕ್ಕೆ ಅನುಮತಿ ನೀಡಿ ಮನೆಗೆ ತರಿಸಿಕೊಳ್ಳಬಹುದು ಎಂದು ವ್ಯಂಗ್ಯವಾಗಿ ಸರ್ಕಾರಕ್ಕೆ ತಿವಿದರು

ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮಧ್ಯಪ್ರವೇಶ ಮಾಡಿ, ಈ ರೀತಿ ತರಿಸಿಕೊಳ್ಳುತ್ತಿರಬಹುದೇನೋ, ಯಾರಿಗೆ ಗೊತ್ತು? ಇದನ್ನು ರೆಗ್ಯುಲರೈಸ್ ಮಾಡುವುದು ಒಳ್ಳೆಯದು, ಕರಾವಳಿಯಲ್ಲಿ ಬೀಚ್‌ನಲ್ಲಿ ಕುಡಿಯುತ್ತಾರೆ, ಮಾರಾಟಕ್ಕೆ ಅನುಮತಿ ಇಲ್ಲ. ಹಾಗಾಗಿ ರೆಗ್ಯುಲರೈಸ್ ಮಾಡುವುದು ಒಳ್ಳೆಯದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಸ್ವಿಗ್ಗಿ, ಝೋಮಾಟೋ ಮೂಲಕ ಡ್ರಗ್ಸ್ ಸರಬರಾಜು ಕೂಡಾ ಆಗುತ್ತದೆ ಎಂದು ಶಾಸಕ ಸುರೇಶ್ ಕುಮಾರ್ ಆರೋಪಿಸಿದ್ರು. ಆಗ ನಿಮ್ಮ ಬಳಿ ಮಾಹಿತಿ ಇದ್ದರೆ ಸರ್ಕಾರಕ್ಕೆ ಕೊಡಿ, ನಾವು ಇದರ ಬಗ್ಗೆ ಗಂಭೀರವಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.