R&AWದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ – ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಭಾರತದ ವಿದೇಶಿ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (R&AW) ದಲ್ಲಿ ಇಂಟಲಿಜೆನ್ಸ್ ಸ್ಪೆಷಲ್ ಆಫೀಸರ್ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವೇಣುಗೋಪಾಲ್ ಹಾಗೂ ಅರವಿಂದ್ ಎಂಬುವರನ್ನು ಬಂಧಿಸಲಾಗಿದೆ. ನಕಲಿ ಲೆಟರ್ ಹೆಡ್ಸ್, ಆದೇಶ ಪತ್ರ, ಐಡಿ ಕಾರ್ಡ್ಸ್, ಸೀಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
R&AW ಸಂಸ್ಥೆಯಲ್ಲಿ ಇಂಟಲಿಜೆನ್ಸ್ ಸ್ಪೆಷಲ್ ಆಫೀಸರ್‌ಗಳೆಂದು ಪರಿಚಯಿಸಿಕೊಳ್ಳುತ್ತಿದ್ದ ಈ ಆರೋಪಿಗಳು ಬೆಂಗಳೂರು ನಗರ ಕಚೇರಿಯನ್ನು ತಾವೇ ನಿರ್ವಹಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರು. ನಂತರ R&AWಗೆ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ತಮಗೆ ಇದೆಯೆಂದು ನಂಬಿಸಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಳ್ಳುತ್ತಿದ್ದರು. ನಂತರ ಕೆಲಸ ಕನ್ಪರ್ಮ್ ಆದಂತೆ ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ವಂಚನೆಗೊಳಗಾಗಿದ್ದ ಜೆ.ಪಿ. ನಗರದ ನಿವಾಸಿಯೊಬ್ಬರು ಸಿಸಿಬಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸರು, ಆಂಧ್ರಪ್ರದೇಶದಲ್ಲಿ ವೇಣುಗೋಪಾಲ್‌ನನ್ನು ಬಂಧಿಸಿದ್ದರು. ಬಳಿಕ ಜಯನಗರದ 9ನೇ ಬ್ಲಾಕ್‌ನ ನಿವಾಸಿಯಾಗಿರುವ ಅರವಿಂದ್ ಎಂಬಾತನನ್ನು ಬಂಧಿಸಿದ್ದಾರೆ. ಜೆರಾಕ್ಸ್ ಮತ್ತು ಸ್ಟೇಷನರಿ ಅಂಗಡಿ ಹೊಂದಿದ್ದ ಅರವಿಂದ್, ತನಿಖೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ಅನ್ನು ಸ್ವೀಕರಿಸಿರಲಿಲ್ಲ. ನಂತರ ಆತನನ್ನ ಬಂಧಿಸಲಾಯಿತು. ಆರೋಪಿಗಳು ಸುಮಾರು 30 ಉದ್ಯೋಗಾಂಕ್ಷಿಗಳಿಗೆ ಕೆಲಸ ಕೊಡಿಸುವುದಾಗಿ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

ಪ್ರಮುಖ ಆರೋಪಿ ವೇಣುಗೋಪಾಲ್ ತಂಗುತ್ತಿದ್ದ ಗಾಂಧಿನಗರದ ಲಾಡ್ಜ್ವೊಂದರಲ್ಲಿ R&AW ಸಂಸ್ಥೆಯ ಹೆಸರಿನಲ್ಲಿರುವ 86 ಲೆಟರ್ ಹೆಡ್ಸ್, ಗುರುತಿನ ಚೀಟಿ, 6 ಸೇವಾ ಪುಸ್ತಕಗಳು, ನಕಲಿ ನೇಮಕಾತಿ ಆದೇಶದ ಪತ್ರಗಳು, 9 ಸೀಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಯಲಹಂಕದ ಸುಪ್ರೀಂ ಲೇಔಟ್‌ನಲ್ಲಿ ಆರೋಪಿತರು ಹೊಂದಿದ್ದ ಕಚೇರಿಯಿಂದ ಕಲರ್ ಪ್ರಿಂಟರ್, ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.