ಬಾಂಬ್ ಪತ್ತೆ ದಳದ ಶ್ವಾನ ‘ಕನಕ’ಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಹಾವೇರಿ: ಬಾಂಬ್/ಸ್ಫೋಟಕ ಪತ್ತೆ ದಳದಲ್ಲಿ ವಿಶೇಷ ಪರಿಣತಿ ಹೊಂದಿದ್ದ, ಹಾವೇರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕ ಎಂಬ ಶ್ವಾನ ಅಸುನೀಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಶ್ವಾನವು ಲ್ಯಾಬ್ರಡರ್ ರಿಟ್ರಿವರ್ ತಳಿಯಾದ್ದಾಗಿದೆ. ಬೆಂಗಳೂರಿನಲ್ಲಿ 2019ರಲ್ಲಿ 2 ತಿಂಗಳುಗಳ ಕಾಲ ತರಬೇತಿ ಪಡೆದು ನಂತರ ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ಬೆಂಗಳೂರು ವೈಮಾನಿಕ ಪ್ರದರ್ಶನ ಮತ್ತು 2023ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2024ನೇ ಸಾಲಿನ ಲೋಕಸಭಾ ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ಪ್ರಧಾನಮಂತ್ರಿಗಳ ಬಂದೋಬಸ್ತ್ ಕರ್ತವ್ಯ ಹಾಗೂ ಅನೇಕ ಗಣ್ಯವ್ಯಕ್ತಿಗಳ ಬಂದೋಬಸ್ತ್ ಕರ್ತವ್ಯ ಹೀಗೆ ಒಟ್ಟು 80ಕ್ಕಿಂತ ಹೆಚ್ಚು ಕಾರ್ಯಕ್ರಮಗಳ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿತ್ತು.
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ತೆರಳಿದ್ದ ವೇಳೆ ಕನಕ ಅಪಘಾತಕ್ಕೀಡಾಗಿ ಗಾಯಗೊಂಡಿತ್ತು. ಎ.ಎಸ್.ಸಿ ತಂಡದೊಂದಿಗೆ ಮಾರ್ಚ್ 2 ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡಿಪೋದ ಕೆಎಸ್ಆರ್ಟಿಸಿ ಬಸ್ ಶ್ವಾನಕ್ಕೆ ಡಿಕ್ಕಿ ಹೊಡೆದಿದೆ. ಪರಿಮಾಮ, ಶ್ವಾನ ಗಂಭೀರವಾಗಿ ಗಾಯಗೊಂಡಿತ್ತು. ಹೊಸಪೇಟೆ ಪಶು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲ ನೀಡಲಿಲ್ಲ.
ಶ್ವಾನದ ಕಳೇಬರಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಲಾಯಿತು. ತರಬೇತಿ ನೀಡಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತರಬೇತುದಾರರು ಕನಕನ ಕಳೇಬರವನ್ನು ತಬ್ಬಿ ಕಣ್ಣೀರು ಹಾಕಿದ್ದು ಮನಕಲುಕುವಂತಿತ್ತು.