ವಿಧಾನಸೌಧದಲ್ಲಿ ಮೂರು ದಿನಗಳ ಪುಸ್ತಕ ಮೇಳಕ್ಕೆ ಭಾರಿ ಜನಸ್ತೋಮ – ಮುಂದಿನ ವರ್ಷ ಇನ್ನಷ್ಟು ಅದ್ಧೂರಿ ಆಯೋಜನೆ

ಬೆಂಗಳೂರು : ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಪುಸ್ತಕ ಮೇಳ ಭಾನುವಾರ ತೆರೆ ಕಂಡಿದ್ದು, ಮೂರು ದಿನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಕೊನೆಯ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಪುಸ್ತಕ ಪ್ರಿಯರು ಆಗಮಿಸಿದ್ದರಿಂದ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಭಾನುವಾರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡದ ಸಂಗೀತ ಕಾರ್ಯಕ್ರಮದೊಂದಿಗೆ ಮೇಳಕ್ಕೆ ಅದ್ಧೂರಿ ತೆರೆ ಬಿತ್ತು. ಇದಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಂದಿನ ವರ್ಷ ಸರ್ಕಾರದ ಸಹಕಾರದೊಂದಿಗೆ ಇನ್ನಷ್ಟು ದೊಡ್ಡಮಟ್ಟದಲ್ಲಿ ಹಾಗೂ ವ್ಯವಸ್ಥಿತವಾಗಿ ಪುಸ್ತಕ ಮೇಳ ಆಯೋಜಿಸುವುದಾಗಿ ಘೋಷಿಸಲಾಯಿತು.
ಭಾನುವಾರ ಬೆಂಗಳೂರು ಮಾತ್ರವಲ್ಲದೆ ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರಿಂದ ವಿಧಾನಸೌಧದ ನಾಲ್ಕೂ ದಿಕ್ಕುಗಳಲ್ಲಿ ಜನವೋ ಜನ. 151 ಪುಸ್ತಕಗಳ ಮಳಿಗೆಗಳಿಗೂ ಭೇಟಿ ನೀಡಿದ ಜನರು ತಮ್ಮ ಇಷ್ಟದ ಪುಸ್ತಕ ಖರೀದಿಸಿದರು.
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಮೂರು ದಿನಗಳಲ್ಲಿ ಒಟ್ಟು ಎರಡು ಲಕ್ಷಕ್ಕೂ ಹೆಚ್ಚು ಜನ ಪುಸ್ತಕ ಮೇಳಕ್ಕೆ ಭೇಟಿ ನೀಡಿರುವುದಾಗಿ ಅಂದಾಜಿಸಲಾಗಿದೆ. ಮೊದಲೆರಡು ದಿನ ಸುಮಾರು 50ರಿಂದ 60 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಕೊನೆಯ ದಿನ ಭಾನುವಾರ 1 ಲಕ್ಷಕ್ಕೂ ಹೆಚ್ಚು ಮಂದಿ ಪುಸ್ತಕ ಮೇಳದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಮೂರು ದಿನಗಳ ಪುಸ್ತಕ ಮೇಳ ಯಶಸ್ವಿಯಾಗಿ ನಡೆದಿದೆ. ನಮಗೆ ಈ ಬಾರಿ ಎಷ್ಟು ಜನ ಬರಬಹುದು ಎಂಬ ಚಿತ್ರಣ ಸಿಕ್ಕಿದೆ. ಮೊದಲ ಬಾರಿಗೆ ಆಯೋಜಿಸಿದ್ದರಿಂದ ಕೆಲ ಸಣ್ಣಪುಟ್ಟ ಸಮಸ್ಯೆ ಕೆಲವರಿಗೆ ಆಗಿರಬಹುದು. ಮುಂದೆ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಹಾಗೂ ಇನ್ನಷ್ಟು ವ್ಯವಸ್ಥಿತವಾಗಿ ಪುಸ್ತಕ ಮೇಳ ಆಯೋಜಿಸಲಾಗುವುದು. ಪ್ರತಿ ವರ್ಷ ಮೇಳ ನಡೆದರೆ ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಸಾಹಿತ್ಯಾಸಕ್ತರು ಬರುತ್ತಾರೆ. ಭವಿಷ್ಯದಲ್ಲಿ ಇದು ಒಂದು ರೀತಿ ರಾಜ್ಯಮಟ್ಟದ ಪುಸ್ತಕ ಹಬ್ಬವಾಗಿ ಬೆಳೆಯುವ ನಿರೀಕ್ಷೆ ಇದೆ ಎಂದು ಹೇಳಿದರು.

₹1 ಲಕ್ಷ ಮೊತ್ತದ ಪುಸ್ತಕ ಮಾರಾಟ
ಪುಸ್ತಕ ಮೇಳದಲ್ಲಿ ಮಳಿಗೆಗಳನ್ನು ತೆರೆದಿದ್ದ ವಿವಿಧ ಪ್ರಕಾಶಕರು, ಪುಸ್ತಕ ಮಾರಾಟಗಾರರು ನೀಡಿದ ಮಾಹಿತಿ ಪ್ರಕಾರ, ಪ್ರತಿ ದಿನ ಕನಿಷ್ಠ 20 ಸಾವಿರ ರು.ನಿಂದ 1 ಲಕ್ಷ ರು. ಗಳಷ್ಟು ಮೊತ್ತದ ಪುಸ್ತಕಗಳು ಮಾರಾಟವಾಗಿವೆ. ಸ್ವಂತ ಪ್ರಕಾಶನ ಅಥವಾ ಒಂದೆರಡು ಪ್ರಕಾಶನದ, ಇಲ್ಲವೇ ನಿರ್ದಿಷ್ಟ ಪುಸ್ತಕಗಳನ್ನಷ್ಟೇ ಮಾರಾಟಕ್ಕೆ ತಂದಿದ್ದ ಮಳಿಗೆಗಳಲ್ಲಿ ಮೂರು ದಿನಗಳಲ್ಲಿ ಗರಿಷ್ಠ 60, 70 ಸಾವಿರ ರು.ವರೆಗೆ ಪುಸ್ತಕ ಮಾರಾಟವಾಗಿವೆ. ಬಹು ಮಾದರಿ ಪುಸ್ತಕಗಳ ಮಳಿಗೆಗಳಲ್ಲಿ ನಿತ್ಯ 1 ಲಕ್ಷ ರು. ವರೆಗೂ ಪುಸ್ತಕಗಳು ಮಾರಾಟವಾಗಿವೆ.