3 ದಿನ ನಾಲೆಗೆ ಬಿದ್ದಿದ್ದ ಕಾಡಾನೆ ಯಶಸ್ವಿ ರಕ್ಷಣೆ

ಮಂಡ್ಯ: ಶಿವನಸಮುದ್ರ ಬಳಿಯ ನಾಲೆಗೆ ಬಿದ್ದು ಪ್ರಾಣಾಪಾಯದಿಂದ ಒದ್ದಾಡುತ್ತಿದ್ದ ಕಾಡಾನೆಯನ್ನು ರಕ್ಷಿಸುವಲ್ಲಿ ಕೊನೆಗೂ ಕರ್ನಾಟಕ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಅರಣ್ಯಾಧಿಕಾರಿಗಳ ಸಾಹಸಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಡ್ಯ ಜಿಲ್ಲೆಯ ಶಿವನಸಮುದ್ರದ ಬಳಿಯ ನಾಲೆಯಲ್ಲಿ ಮೂರು ದಿನಗಳ ಹಿಂದೆ ಬಿದ್ದಿದ್ದ ಕಾಡಾನೆಯನ್ನು ರಕ್ಷಿಸಲು ಅರಣ್ಯ ಇಲಾಖೆ ನಡೆಸಿದ್ದ ಮ್ಯಾರಥಾನ್ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಅರಣ್ಯ ಇಲಾಖೆಯ ಸತತ ಕಾರ್ಯಾಚರಣೆಯಿಂದಾಗಿ ನಾಲೆಗೆ ಬಿದ್ದಿದ್ದ ಕಾಡಾನೆ ಜೀವಂತ ಪಾರಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಮೇಲೆತ್ತಿದ್ದಾರೆ. ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಸಮೀಪದ ಹಲಗೂರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಅರಸಿ ಬಂದು ನಾಲೆಗೆ ಬಿದ್ದ ಕಾಡಾನೆ
ಅಧಿಕಾರಿಗಳ ಪ್ರಕಾರ 10 ರಿಂದ 15 ವರ್ಷ ಪ್ರಾಯದ ಕಾಡಾನೆ ಆಹಾರ ಅರಸಿ ಬಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವವಸಮುದ್ರ ಬಳಿಯ ನಾಲೆಗೆ ಬಿದ್ದಿತ್ತು. ಖಾಸಗಿ ಪವರ್ ಸ್ಟೇಷನ್ಗೆ ನೀರು ಸರಬರಾಜು ಮಾಡುವ ನಾಲೆಯಲ್ಲೇ 3 ದಿನದಿಂದ ಆನೆ ಸಿಲುಕಿತ್ತು. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸ್ಥಳದಲ್ಲೇ ಬೀಡುಬಿಟ್ಟು ನಿರಂತರ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ರಕ್ಷಿಸಿದ್ದಾರೆ.