ಚಿಕ್ಕಬಳ್ಳಾಪುರದಲ್ಲಿ ಅಮೆರಿಕದ B-1B ಬಾಂಬರ್ ಹಾರಾಟ; ಭಾರಿ ಸದ್ದಿಗೆ ಜನತೆಯಲ್ಲಿ ಆತಂಕ

ಚಿಕ್ಕಬಳ್ಳಾಪುರ: ಅಮೆರಿಕದ ವಾಯುಸೇನೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ (B-1B Lancer Bomber) ಯುದ್ಧ ವಿಮಾನದ ಹಾರಾಟ ನಡೆಸುತ್ತಿರುವುದನ್ನು ಕಂಡು ಚಿಕ್ಕಬಳ್ಳಾಪುರದ (Chikkaballapura) ಜನತೆ ಬೆಚ್ಚಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಆರೂರು, ಆವಲನಾಗೇನಹಳ್ಳಿ, ಚಿಕ್ಕಪೈಲಗುರ್ಕಿ, ಸೇರಿದಂತೆ ತುಮಕಲಹಳ್ಳಿ ಹತ್ತಾರು ಗ್ರಾಮಗಳ ಮೇಲೆ ಅಮೆರಿಕದ B-1B ಲ್ಯಾನ್ಸರ್ ಬಾಂಬರ್ ಸೂಪರ್ಸಾನಿಕ್ ಯುದ್ಧ ವಿಮಾನ (War Jet) ಇಂದು ಹಾರಾಟ ನಡೆಸಿತು. ಇದನ್ನು ಕಂಡ ಜನ ಆತಂಕಕ್ಕೆ ಒಳಗಾದರು.
ಅಂದಹಾಗೆ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನದ ಸದ್ದು ಕೇಳಿ ಜನ ಇದ್ಯಾವುದೋ ಹೆಲಿಕಾಫ್ಟರ್ ಇರಬೇಕು. ಇಷ್ಟು ಸೌಂಡ್ ಬರ್ತಿದೆ ಅಂದ್ರೆ ಕೆಟ್ಟು ಹೋಗಿರಬೇಕು ಎಲ್ಲೋ ಬಿದ್ದು ಹೋಗಿದೆ ಅಂತ ಭಾವಿಸಿದ್ರು. ಹಾಗಾಗಿ ಹತ್ತಾರು ಹಳ್ಳಿಗಳ ಜನ ಹೆಲಿಕಾಪ್ಟರ್ ಬೆಟ್ಟ ಗುಡ್ಡಗಳಲ್ಲಿ ಬಿದ್ದು ಹೋಗಿದೆ ಅಂತ ಬಾಯಿಂದ ಬಾಯಿಗೆ ಮಾತಾಡಿಕೊಂಡು ವದಂತಿ ಹಬ್ಬಿಸಿದ್ದರು. ಆ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಪೇರೇಸಂದ್ರ ಪೊಲೀಸರ ಗಮನಕ್ಕೂ ಹೋಗಿ ಠಾಣೆಯ ಪೊಲೀಸರು (Chikkaballapura Police) ಸಹ ನಿಜ ಇರಬಹುದು ಅಂತ ಬೀಟ್ ವ್ಯಾಪ್ತಿಗಳಲ್ಲಿ ಕರೆ ಮಾಡಿ ಮಾಹಿತಿ ಕಲೆ ಹಾಕಿ ಬೆಟ್ಟ-ಗುಡ್ಡಗಳ ಕಡೆ ಹೋಗಿ ಹೆಲಿಕಾಪ್ಟರ್ ಪತನವಾಗಿದೆಯಾ ಅಂತ ಹುಡುಕಾಟ ಸಹ ನಡೆಸಿದ್ದರು.
ಆದ್ರೆ ಕೊನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಇದು ಬಿ1ಬಿ ಬಾಂಬರ್ನ ಸದ್ದು, ಈಗಾಗಲೇ ಬಿ1ಬಿ ಬಾಂಬರ್ ವಿಮಾನ ಏರ್ ಪೋರ್ಟ್ನಲ್ಲಿ ಸೇಫ್ ಆಗಿ ಲ್ಯಾಂಡ್ ಆಗಿದೆ ಅಂತ ತಿಳಿಸಿದ್ದಾರೆ.
ವಿಮಾನದ ಸದ್ದಿಗೆ ಮನೆಯಲ್ಲಿದ್ದ ಪಾತ್ರೆಗಳೆಲ್ಲ ಚೆಲ್ಲಾಪಿಲ್ಲಿ!
ಇನ್ನೂ ʻಪಬ್ಲಿಕ್ ಟಿವಿʼ ಜೊತೆ ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ರೈತ ಮಂಜುನಾಥ್ ಮಾತನಾಡಿ, ತೋಟದಲ್ಲಿ ಗೊಬ್ಬರ ಚೆಲ್ಲುತ್ತಿದ್ದೆ. ಆದ್ರೆ ಹೆಲಿಕಾಪ್ಟರ್ ಸದ್ದಿಗೆ ನಾನು ಭಯಭೀತನಾಗಿ ಅಲ್ಲೇ ಕೂತುಬಿಟ್ಟೆ ಅಂತ ಆತಂಕ ವ್ಯಕ್ತಪಡಿಸಿದರು. ಅಲ್ಲದೇ ವಿಮಾನದ ಸದ್ದಿಗೆ ಮನೆಯಲ್ಲಿದ್ದ ಪಾತ್ರೆಗಳೆಲ್ಲವೂ ಕೆಳಗೆ ಬಿದ್ದವು ಭಯದಿಂದ ಆಚೆ ಓಡಿಬಂದೆವು ನೋಡಿದ್ರೆ ಕಣ್ಣಿಗೆ ಏನೂ ಕಾಣಲಿಲ್ಲ. ಆದ್ರೂ ಅದು ಹೆಲಿಕಾಪ್ಟರ್ ಸದ್ದಿನ ಮಾದರಿಯಲ್ಲೇ ಇತ್ತು. ಹಾಗಾಗಿ ಶಬ್ದ ಕೇಳಿ ಹೆಲಿಕಾಪ್ಟರ್ ಎಲ್ಲೋ ಬಿದ್ದು ಹೋಗಿರಬೇಕು ಅಂದುಕೊಂಡೆವು ಅಂತ ಆರೂರು ಗ್ರಾಮದ ಯುವಕ ತೇಜಸ್ ತಮ್ಮ ಅನುಭವ ಹಂಚಿಕೊಂಡರು.
ಅಲ್ಲದೇ ಆಟೋ ಚಾಲಕ ರವಿ ಸಹ ಮಾತನಾಡಿ ನಾನು ಹೆಲಿಕಾಪ್ಟರ್ ನೋಡಿದೆ ಜೋರು ಶಬ್ದ ಕ್ಷಣ ಮಾತ್ರಗಳಲ್ಲೇ ಮಾಯವಾಗಿತ್ತು. ಅದು ತುಂಬಾ ಕೆಳಗಡೆ ಹಾರಾಟ ಮಾಡ್ತಿತ್ತು. ಆದ್ರೆ ಅದು ಬಿದ್ದಿಲ್ಲ ಅಂತ ಘಟನೆಯ ಬಗ್ಗೆ ವಿವರಿಸಿದರು.
ಬಿ-1ಬಿ ಲ್ಯಾನ್ಸರ್ ಬಾಂಬರ್ ಚಿಕ್ಕಬಳ್ಳಾಪುರಕ್ಕೆ ಬಂದಿದ್ದೇಕೆ?
ಭಾರತ-ಅಮೆರಿಕ ಜಂಟಿ ಸಮರಾಭ್ಯಾಸದ ಭಾಗವಾಗಿ ಅಮೆರಿಕದ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನ ಭಾರತಕ್ಕೆ ಆಗಮಿಸಿದೆ ಅಂತ ತಿಳಿದುಬಂದಿದೆ. ನವೆಂಬರ್ 10 ರಿಂದ 13ರ ವೆರೆಗೆ ಭಾರತ ಹಾಗೂ ಯುಎಸ್ಎ ಸಮರಾಭ್ಯಾಸ ನಡೆಯುತ್ತಿದೆ. ಎರಡು ವಾಯುಸೇನೆಯ ನಡುವೆ ಸಮನ್ವಯತೆ ಜಂಟಿ ಕಾರ್ಯಾಚರಣೆ ಮತ್ತು ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನ ಈ ಸಮರಾಭ್ಯಾಸ ಹೊಂದಿದೆ. ಇನ್ನೂ ದೆಹಲಿಯಿಂದ ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಈ ವಿಮಾನ ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
B-1B ಲ್ಯಾನ್ಸರ್ ಬಾಂಬರ್ ಒಂದು ದೀರ್ಘ-ಶ್ರೇಣಿಯ, ಬಹು-ಮಿಷನ್, ಸೂಪರ್ಸಾನಿಕ್ ವಿಮಾನವಾಗಿದ್ದು, ಇದನ್ನ ಅಮೆರಿಕದ ವಾಯುಪಡೆ 1985 ರಿಂದ ಬಳಸುತ್ತಿದೆ. ಇದನ್ನ ʻದಿ ಬೋನ್ʼ ಎಂದೂ ಕರೆಯಲಾಗುತ್ತದೆ, ಅಂದ್ರೆ ವಾಯುಸೇನೆಯ ಬೆನ್ನೆಲುಬು ಎಂದರ್ಥ. ಇದು ಸಾಂಪ್ರದಾಯಿಕ ಬಾಂಬ್ ದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮುಂದುವರಿದ ಭಾಗವೇ ಬಿ2 ಬಾಂಬ್ ಯುದ್ಧ ವಿಮಾನ.