ನಿರ್ಮಾಣ ಹಂತದ ತೊಟ್ಟಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ: ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದಲ್ಲಿ ಘಟನೆ

ದಾವಣಗೆರೆ: ನಿರ್ಮಾಣ ಹಂತದ ಕಟ್ಟಡವೊಂದರ ತೊಟ್ಟಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರು (Santhebennur) ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಅವಾಜ್ ಖಾನ್ (6) ಎಂದು ಗುರುತಿಸಲಾಗಿದೆ. ಬಾಲಕ ಸಂತೆಬೆನ್ನೂರು ಗ್ರಾಮದ ಫುಟ್ ವೇರ್ ಅಂಗಡಿ ಮಾಲೀಕ ಅಪ್ತಾಬ್ ಖಾನ್ ಅವರ ಪುತ್ರ. ಮೂತ್ರ ವಿಸರ್ಜನೆಗೆ ತೆರಳಿದಾಗ ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ತೊಟ್ಟಿಯಲ್ಲಿ ಚಪ್ಪಲಿ ತೇಲಾಡುತ್ತಿರುವುದನ್ನ ಗಮನಿಸಿದಾಗ ಬಾಲಕ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಸಿಸಿ ಕ್ಯಾಮರಾದಲ್ಲಿ ಬಾಲಕನ ಓಡಾಟದ ಕೊನೆಯ ಕ್ಷಣಗಳು ಸೆರೆಯಾಗಿದೆ. ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.