ದೈವದ ಜಾಗ ಪಡೆದು ಆರಾಧನೆಗೆ ತಡೆ- MSEZ ವಿರುದ್ಧ ಭಾರೀ ಆಕ್ರೋಶ

ತುಳುನಾಡಿನ ಧಾರ್ಮಿಕ ನಂಬಿಕೆಗಳ ಮೇಲೆ MSEZ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ MSEZ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ನೆಲ್ಲಿದಡಿ ಕುಟುಂಬಸ್ಥರು ಮತ್ತು ಬಜಪೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಕೊಟ್ಟ ಮಾತು ಮರೆತ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಅಧಿಕಾರಿಗಳ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೈವದ ಆರಾದನೆಗೆ ತೆರಳಲು ಅನುಮತಿ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಗ್ರಾಮ ಸ್ಥರು ಕಿಡಿ ಕಾರಿದ್ದಾರೆ. ದೈವಾರಾಧನೆಗೆ ಅಡ್ಡಿಪಡಿಸುವ ಮೂಲಕ MSEZ ಅಧಿಕಾರಿಗಳು ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿವಾದ ಮುಂದೆ ದೊಡ್ಡ ಮಟ್ಟದ ಹೋರಾಟಕ್ಕೆಕಾರಣವಾಗುವ ಸಾಧ್ಯತೆ ಇದೆ.
ಮಂಗಳೂರು ತಾಲೂಕಿನ ಬಜಪೆ ಗ್ರಾಮದಲ್ಲಿರುವ ನೆಲ್ಲಿದಡಿ ಗುತ್ತು ಮತ್ತು ಅಲ್ಲಿನ ಕಾಂತೇರಿ ಜುಮಾದಿ ದೈವಸ್ಥಾನವು ಎಂಟುನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಪುರಾತನ ಕ್ಷೇತ್ರ. 2006 ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಸ್ಥಾಪನೆಗೆ ಸರ್ಕಾರವು ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳು ನೆಲಸಮಗೊಂಡಿದ್ದವು.
