ಮಹಿಳಾ ಸಬಲೀಕರಣ ಯೋಜನೆಗಳು: 12 ರಾಜ್ಯಗಳ ಪೈಕಿ 6 ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿವೆ – ಪಿಆರ್ಎಸ್ ವರದಿ

ನವದೆಹಲಿ: ದೇಶದಲ್ಲಿ ಮಹಿಳಾ ಯೋಜನೆಗಳಿಗೆ (Empowering Women) ಮೀಸಲಿಟ್ಟ 12 ರಾಜ್ಯಗಳ ಪೈಕಿ 6 ರಾಜ್ಯಗಳು ಆರ್ಥಿಕ ಸಮಸ್ಯೆಗೆ ಸಿಲುಕಿವೆ ಎಂದು ವರದಿಯೊಂದು ತಿಳಿಸಿವೆ.

ಹೌದು, ಬಡ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ಹಲವು ನಗದು ಆಧಾರಿತ ಯೋಜನೆಗಳಿಗೆ ದೇಶದ 12 ರಾಜ್ಯಗಳು 1.68 ಲಕ್ಷ ಕೋಟಿಯನ್ನು ಮೀಸಲಿಟ್ಟಿದೆ. ಅಂದರೆ ದೇಶದ ಜಿಡಿಪಿಯ ಶೇ.0.5ರಷ್ಟಕ್ಕೆ ಸಮವಾಗಿದೆ. ಮೂರು ವರ್ಷಗಳ ಹಿಂದೆ ಕೇವಲ 2 ರಾಜ್ಯಗಳು ಮಾತ್ರ ಮಹಿಳೆಯರಿಗೆ ನಗದು ನೀಡುವ ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ ಈಗ ಈ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪಿಆರ್ಎಸ್ ಲೆಜಿಸ್ಲೆಟಿವ್ ರಿಸರ್ಚ್ (PRS Legislative Research) ಸಂಸ್ಥೆಯ ಹೊಸ ವರದಿ ಹೇಳಿದೆ.
ಗಮನಾರ್ಹ ಸಂಗತಿಯೆಂದರೆ 12 ರಾಜ್ಯಗಳ ಪೈಕಿ, ಆರು ರಾಜ್ಯಗಳು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಾಯ ಮಾಡಿದರೂ, ರಾಜ್ಯಗಳ ಬೊಕ್ಕಸಕ್ಕೆ ಭಾರವಾಗಿವೆ. ಶೇ.20ರಿಂದ 25ರಷ್ಟು ಹಣ ಬಳಕೆ ಆಗುವುದರಿಂದ ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳಿಗೆ ನಿಧಿ ಕಡಿತವಾಗಲಿದೆ. ಇದರಿಂದ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಧಿಯ ಕೊರತೆ ಉಂಟಾಗುತ್ತಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕವು ತನ್ನ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (GSDP) 0.3% ನಷ್ಟು ಹೆಚ್ಚುವರಿ ಆದಾಯ ಹೊಂದಿತ್ತು. ನಗದು ವರ್ಗಾವಣೆಯ ಯೋಜನೆ ಬಳಿಕ ಕೊರತೆಗೆ ಹೋಗಲಿದೆ ಎಂದು ವರದಿ ಉಲ್ಲೇಖಿಸಿದೆ.
ನಗದು ವರ್ಗಾವಣೆಗಳು ರಾಜಕೀಯವಾಗಿ ಜನಪ್ರಿಯವಾಗಿವೆ ಮತ್ತು ಸಾಮಾಜಿಕವಾಗಿ ಬಹಳ ಪ್ರಭಾವಶಾಲಿಯಾಗಿವೆ. ಆದರೆ ಹೆಚ್ಚಿನ ರಾಜ್ಯಗಳು ಆದಾಯದಲ್ಲಿ ಏರಿಕೆ ಕಾಣದೇ ಈ ರೀತಿಯ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡರೆ ಮುಂದೆ ದೊಡ್ಡ ಹಣಕಾಸಿನ ಅಪಾಯಕ್ಕೆ ಸಿಲುಕಬಹುದು ಎಂಬ ಎಚ್ಚರಿಕೆಯನ್ನು ಪಿಆರ್ಎಸ್ ಹೇಳಿದೆ.
ಮಹಿಳೆಯರ ಸಬಲೀಕರಣ ಸ್ಕೀಂ
ಕರ್ನಾಟಕ – ಗೃಹಲಕ್ಷ್ಮಿ ಯೋಜನೆ – ಮಾಸಿಕ 2,000 ರೂ. (28,608 ಕೋಟಿ ರೂ. ಮೀಸಲು)
ದೆಹಲಿ – ಸಿಎಂ ಮಹಿಳಾ ಸಮೃದ್ಧಿ ಯೋಜನೆ – ಮಾಸಿಕ 2,500 ರೂ. (5,100 ಕೋಟಿ ರೂ. ಬಜೆಟ್ನಲ್ಲಿ ಮೀಸಲು)
ಒಡಿಶಾ – ಸುವರ್ಣ ಜ್ಯೋತಿ ಯೋಜನೆ – ವಾರ್ಷಿಕ 10,000 ರೂ. (10,145 ಕೋಟಿ ರೂ. ಬಜೆಟ್ನಲ್ಲಿ ಮೀಸಲು)
ಮಧ್ಯಪ್ರದೇಶ – ಲಾಡ್ಲಿ ಬೆಹೆನ್ ಯೋಜನೆ – ಮಾಸಿಕ 1,500 ರೂ. (18,669 ಕೋಟಿ ಬಜೆಟ್ನಲ್ಲಿ ಮೀಸಲು)
ತಮಿಳುನಾಡು – ಕಲೈಗ್ನರ್ ಮಗಳಿರ್ ಉರಿಮೈ ತೊಗಯ್ ತಿಟ್ಟಂ – ಮಾಸಿಕ 1,000 ರೂ. (7000 ಕೋಟಿ ರೂ. ಬಜೆಟ್ನಲ್ಲಿ ಮೀಸಲು)
ಮಹಾರಾಷ್ಟ್ರ– ಲಡ್ಕಿ ಬಹಿನ್ ಯೋಜನೆ – ಮಾಸಿಕ 1,500 ರೂ. (ಈ ತಿಂಗಳಿನಿಂದ ಆರಂಭ)
ಜಾರ್ಖಂಡ್ – ಸಿಎಂ ಮೈಯಾನ್ ಸಮ್ಮಾನ್ ಯೋಜನೆ – ಮಾಸಿಕ 2,500 ರೂ. (13,363 ಕೋಟಿ ರೂ. ಬಜೆಟ್ನಲ್ಲಿ ಮೀಸಲು)