ಬೆಂಗಳೂರು EPFO ಕ್ರೆಡಿಟ್ ಸೊಸೈಟಿಯಲ್ಲಿ ₹70 ಕೋಟಿ ವಂಚನೆ: 300ಕ್ಕೂ ಹೆಚ್ಚು ಖಾತೆದಾರರ ಹಣ ದುರ್ಬಳಕೆ

ಬೆಂಗಳೂರು: ಕಷ್ಟಪಟ್ಟು ಜೀವನವೆಲ್ಲಾ ದುಡಿದು ಕೂಡಿಟ್ಟ ಹಣ ಬ್ಯಾಂಕ್ ಗಳಲ್ಲಿ (Bank) ಸೇಫಾ ಅನ್ನೊ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. 300 ಖಾತೆದಾರರ 70 ಕೋಟಿ ಹಣವನ್ನ ಕೊ-ಆಪರೇಟೀವ್ ಬ್ಯಾಂಕ್ ಸಿಬ್ಬಂದಿಗಳೇ ನುಂಗಿ ನೀರು ಕುಡಿದಿದ್ದಾರೆ.

ಇಪಿಎಫ್ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ (EPFO Staff Cooperative Society) ನಡೆದ 70 ಕೋಟಿ ರೂ. ವಂಚನೆ ಪ್ರಕರಣ (Fraud case) ಸಂಬಂಧ ಸಿಇಒ ಸೇರಿ ಇಬ್ಬರು ಪ್ರಮುಖ ಆರೋಪಿಗಳನ್ನ ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೊಸೈಟಿಯ ಸಿಇಒ ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮಿ ಜಗದೀಶ್ ಅರೆಸ್ಟ್ ಆಗಿದ್ದಾರೆ. ಇಪಿಎಫ್ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ 61 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಇಪಿಎಫ್ಒ ಸಿಬ್ಬಂದಿ ಪರಸ್ಪರ ನೆರವಿಗಾಗಿ ಸ್ಥಾಪಿಸಿಕೊಂಡಿರುವ ಸಂಸ್ಥೆಯಾಗಿದೆ.
ಪ್ರಸ್ತುತ ಮತ್ತು ನಿವೃತ್ತ ಇಪಿಎಫ್ಒ ಸಿಬ್ಬಂದಿ ತಮ್ಮ ಉಳಿತಾಯವನ್ನ ಈ ಸೊಸೈಟಿಯಲ್ಲಿ ಎಫ್ಡಿ ಮಾಡಿದ್ದರು. ಈ ಠೇವಣಿಗಳಿಗೆ ಪ್ರತಿ ತಿಂಗಳು ಬಡ್ಡಿ ಹಣ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿಂದ ಹೂಡಿಕೆದಾರರಿಗೆ ಬಡ್ಡಿ ಹಣ ಜಮೆಯಾಗದ ಕಾರಣ ಅನುಮಾನಗೊಂಡು, ಹೂಡಿಕೆದಾರರು ಸ್ವತಃ ಪರಿಶೀಲಿಸಿದಾಗ, ಸೊಸೈಟಿಯಲ್ಲಿ ಇರಿಸಿದ್ದ ಫಿಕ್ಸೆಡ್ ಡೆಪಾಸಿಟ್ ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೇವಲ ಮೂರು ಕೋಟಿ ರೂಪಾಯಿಗಳನ್ನ ಮಾತ್ರ ಸಾಲವಾಗಿ ನೀಡಲಾಗಿದ್ದು, ಉಳಿದ 70 ಕೋಟಿ ರೂ. ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 300ಕ್ಕೂ ಹೆಚ್ಚು ಠೇವಣಿದಾರರು ಈ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಸಿಇಒ ಸೇರಿ ಇಬ್ಬರು ಅರೆಸ್ಟ್
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಿಇಒ ಗೋಪಿ ಅವರ ಆರ್.ಆರ್. ನಗರದ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದಲ್ಲದೆ, ಎ1 ಗೋಪಿನಾಥ್, ಎ2 ಜಗದೀಶ್, ಎ7 ಲಕ್ಷ್ಮಿ, ಎ9 ಲಿಂಗೇಗೌಡ, ಮತ್ತು ಎ10 ರಾಮಾನುಜ ಅವರ ಆರ್.ಆರ್. ನಗರ, ಜೆ.ಪಿ. ನಗರ, ಅಂಜನಾಪುರದಲ್ಲಿರುವ ಮನೆಗಳು, ಪಿಎಫ್ ಕಚೇರಿಯ ಬಳಿಯ ಸೊಸೈಟಿ ಕಚೇರಿ ಮತ್ತು ರಿಚ್ಮಂಡ್ ಸರ್ಕಲ್ ಬಳಿಯ ಕಚೇರಿಗಳ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನ ಸೀಜ್ ಮಾಡಿದ್ದಾರೆ.
ಹಣ ಸೇಫ್ ಅಂತಾ ಬ್ಯಾಂಕಿನಲ್ಲಿಟ್ಟರೂ ದುಡಿದ ಹಣಕ್ಕೆ ಯಾವುದೇ ಗ್ಯಾರಂಟಿಯಿಲ್ಲದಂತಾಗಿದೆ. ಖಾತೆದಾರರ ಹಣಕ್ಕೆ ಕನ್ನ ಹಾಕಿದವರಿಂದ ಹಣ ಕಕ್ಕಿಸಿ ವಾಪಸ್ ಮರಳಿಸಬೇಕಿದೆ.