ಯೂಟ್ಯೂಬರ್ ಮುಕಳೆಪ್ಪ ನಕಲಿ ವಿವಾಹ ನೋಂದಣಿ: ಮುಂಡಗೋಡಿನ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಾರವಾರ: ಯೂಟ್ಯೂಬರ್ ಮುಕಳೆಪ್ಪ (Youtuber Mukaleppa) ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ನೀಡಿ ನೋಂದಣಿ ಮಾಡಿಕೊಂಡ ಕುರಿತು ಶ್ರೀರಾಮ ಸೇನೆ ಹಾಗೂ ಗಾಯಿತ್ರಿ ತಾಯಿ ಶಿವಕ್ಕ ದೂರು ಕೊಟ್ಟ ಬೆನ್ನಲ್ಲೇ ಇದೀಗ ಕಾರವಾರದ ಲೋಕಾಯುಕ್ತ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಕಾರವಾರದ ಲೋಕಾಯುಕ್ತ ಡಿವೈಎಸ್ಪಿ ಧನ್ಯ ನಾಯಕ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮುಂಡಗೋಡು ನೋಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಮೀರಿ ಫೇಕ್ ದಾಖಲೆ ಬಳಸಿ ವಿವಾಹ ನೋಂದಣಿ ಮಾಡಿಕೊಂಡ ಕುರಿತು ದೂರು ನೀಡಲಾಗಿತ್ತು. ಇದಲ್ಲದೇ, ಜಿಲ್ಲೆಯ ನೋಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಬಾಹಿರ ನೋಂದಣಿ ಮಾಡಿಕೊಂಡ ಹಾಗೂ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ, ಯಲ್ಲಾಪುರ ವಿವಾಹ ನೋಂದಣಾಧಿಕಾರಿ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.