ವಾಹನ ಚಾಲಕನಿಗೆ ಅವಾಚ್ಯ ನಿಂದನೆ, ಹಲ್ಲೆ: ಶರತ್ ಚೌಟ ದೋಷಿ ಎಂದು ತೀರ್ಪು; ದಂಡ ಸಹಿತ ಒಂದು ವರ್ಷ ಜೈಲು.

ಬೆಳ್ತಂಗಡಿ: ಪದ್ಮುಂಜದಲ್ಲಿ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ವಾಹನ ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ಆರೋಪಿ ಶರತ್ ಚೌಟ ಎಂಬಾತನಿಗೆ ಬೆಳ್ತಂಗಡಿ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆಯ ವಿವರ: 2024ರ ಆಗಸ್ಟ್ 27ರಂದು ರಾತ್ರಿ 7.30ರ ವೇಳೆಗೆ ಸಿದ್ದೀಕ್ ಎಂಬವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿ ಕಡೆಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಕಣಿಯೂರು ಗ್ರಾಮದ ಪದ್ಮುಂಜದ ರಸ್ತೆ ಬದಿಯಲ್ಲಿ ನಿಂತು ಶರತ್ ಚೌಟ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಸಿದ್ದೀಕ್ ಅವರ ವಾಹನವನ್ನು ಗಮನಿಸಿದ ಶರತ್ ಸಿದ್ದೀಕ್ ರನ್ನು ನೋಡಿ ಅವಾಚ್ಯವಾಗಿ ನಿಂದಿಸಿ ತಲೆ ಮತ್ತು ಎದೆಗೆ ಕೈಯಿಂದ ಗುದ್ದಿ ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 126 (2), 115(2), ಮತ್ತು 351(2)ರಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿ ಶರತ್ ಚೌಟನನ್ನು ದೋಷಿ ಎಂದು ಎಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಬಿಎನ್ಎಸ್ 115 (2)ರ ಅಪರಾಧಕ್ಕೆ ಒಂದು ವರ್ಷ ಸಾದಾ ಜೈಲು ಶಿಕ್ಷೆ, 5 ಸಾವಿರ ರೂ ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ. 126(2)ರಡಿಯ ಅಪರಾಧಕ್ಕೆ ಒಂದು ತಿಂಗಳು ಜೈಲು 1 ಸಾವಿರ ರೂ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದರೆ 10 ದಿನ ಹೆಚ್ಚುವರಿ ಜೈಲು ಶಿಕ್ಷೆ. 352 ಮತ್ತು 351(1)ರಡಿಯ ಅಪರಾಧಕ್ಕಾಗಿ ತಲಾ ಒಂದು ವರ್ಷ ಜೈಲು ಹಾಗೂ 3 ಸಾವಿರ ರೂ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದರೆ ಆರು ತಿಂಗಳು ಹೆಚ್ಚುವರಿ
ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಮೇಲಿನ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬಹುದು ಅಲ್ಲದೆ ವಿಧಿಸಿದ ದಂಡದ ಮೊತ್ತವನ್ನು ಬಿಎನ್ಎಸ್ಎಸ್ ಕಲಂ 395ರಡಿ ಸಂತ್ರಸ್ತ ಸಿದ್ದೀಕ್ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.