ರಾಜ್ಯದಲ್ಲಿ ವೈದ್ಯಕೀಯ ಲೋಪ: ಸರ್ಕಾರಿ ಡಾಕ್ಟರ್ನಿಂದಲೇ ಭ್ರೂಣ ಹತ್ಯೆ; 9 ಜನರ ವಿರುದ್ಧ ಪ್ರಕರಣ ದಾಖಲು!

ಶಿವಮೊಗ್ಗ: ರಾಜ್ಯದಲ್ಲಿ ಬೆಚ್ಚಿ ಬೀಳಿಸು ಘಟನೆ ಎನ್ನುವಂತೆ ಸರ್ಕಾರಿ ವೈದ್ಯೆಯೇ ಅಪ್ರಾಪ್ತೆಗೆ ಗರ್ಭಪಾತ ಮಾಡಿ ಭ್ರೂಣಹತ್ಯೆ ಮಾಡಿರುವಂತ ಘಟನೆ ಸಾಗರದಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಪ್ರಸೂತಿ ತಜ್ಞ ವೈದ್ಯೆ ಸೇರಿದಂತೆ 9 ಮಂದಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ನೀಡಿದಂತ ದೂರಿನ ಹಿನ್ನಲೆಯಲ್ಲಿ ಭಾರತೀಯ ನ್ಯಾಯಸಂಹಿತೆ 2023ರ ಕಲಂ 64(2)(ಎಂ), 89, 3(5) ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 6ರ ಅಡಿಯಲ್ಲಿ ಎ1 ಆರೋಪಿಯಾಗಿ ಅಪ್ರಾಪ್ತ, ಎ2 ಆರೋಪಿಯಾಗಿ ಕುಮಾರ್, ಎ3 ಆರೋಪಿಯಾಗಿ ದೂಗೂರು ಪರಮೇಶ್ವರ, ಎ4 ಆರೋಪಿಯಾಗಿ ಡಾ.ಪ್ರತಿಮಾ ಸೇರಿದಂತೆ 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗೆ ದೂರು ದಾಖಲಾದಂತ ಕೆಲವೇ ಗಂಟೆಯಲ್ಲಿ ಅಪ್ರಾಪ್ತನನ್ನು ಸಾಗರ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇನ್ನೂ ಪೋಕ್ಸೋ ಹಾಗೂ ಅಕ್ರಮವಾಗಿ ಭ್ರೂಣಹತ್ಯೆ ಪ್ರಕರಣ ದಾಖಲಾಗುತ್ತಿದ್ದಂತೇ, ಇನ್ನುಳಿದಂತ ಆರೋಪಿಗಳಾದ ಎ2 ಆರೋಪಿ ಕುಮಾರ, ಎ3 ಆರೋಪಿ ದೂಗೂರು ಪರಮೇಶ್ವರ, ಎ4 ಆರೋಪಿ ಡಾ.ಪ್ರತಿಮಾ ಸೇರಿದಂತೆ ಎಲ್ಲರೂ ನಾಪತ್ತೆಯಾಗಿದ್ದಾರೆ. ಅವರ ಪತ್ತೆ ಹಾಗೂ ಬಂಧನಕ್ಕೆ ಸಾಗರ ತಾಲ್ಲೂಕು ಎಎಸ್ಪಿ ಡಾ.ಬೆನಕ ಪ್ರಸಾದ್ ನೇತೃತ್ವದಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಅಂಡ್ ಟೀಂ ಬಲೆ ಬೀಸಿದೆ.