ಕಬ್ಬು ದರ ನಿಗದಿ ಹೋರಾಟ 7ನೇ ದಿನಕ್ಕೆ: ಕೊರೆಯುವ ಚಳಿಯಲ್ಲೇ ರೈತರ ಜೊತೆ ಮಲಗಿ ಸಾಥ್ ನೀಡಿದ ಬಿಜೆಪಿ ನಾಯಕರು

ಬೆಳಗಾವಿ: ಕಬ್ಬಿಗೆ (Sugarcane) ಬೆಂಬಲ ಬೆಲೆ ನಿಗದಿ ಮಾಡಲು ಬೆಳಗಾವಿಯಲ್ಲಿ (Belagavi) ರೈತರು (Farmers) ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ರೈತರ ಪ್ರತಿಭಟನೆಗೆ ಸಾಥ್ ನೀಡಿರುವ ಬಿಜೆಪಿ (BJP) ನಾಯಕರು ರೈತರ ಜೊತೆ ರಾತ್ರಿಯಿಡೀ ಕೊರೆಯುವ ಚಳಿಯಲ್ಲೇ ಮಲಗಿದ್ದಾರೆ.

ಗುರ್ಲಾಪುರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ನಡೆಯುತ್ತಿದ್ದು, ಮನೆ, ಮಠ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲೇ ರೈತರು ಜೀವನ ನಡೆಸುತ್ತಿದ್ದಾರೆ. ರಸ್ತೆಯಲ್ಲಿಯೇ ಊಟ, ನಿದ್ದೆ ಎಲ್ಲವೂ ನಡೆಯುತ್ತಿದೆ. ರಸ್ತೆ ಪಕ್ಕದಲ್ಲಿ ರೈತರಿಗಾಗಿ ಬೃಹತ್ ಪ್ರಮಾಣದ ಊಟ ತಯಾರಿಸಲಾಗುತ್ತಿದೆ. ಅಕ್ಕ ಪಕ್ಕದ ಗ್ರಾಮಸ್ಥರು ರೈತರಿಗೆ ದವಸ ಧಾನ್ಯಗಳನ್ನು ನೀಡಿದ್ದಾರೆ.
ಇನ್ನು ಮಂಗಳವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ರೈತರ ಪ್ರತಿಭಟನೆಯಲ್ಲಿ ವಿಜಯೇಂದ್ರ (BY Vijayendra) ಭಾಗಿಯಾಗಿದ್ದಾರೆ. ಇಂದು ಹುಟ್ಟುಹಬ್ಬ ಹಿನ್ನೆಲೆ ರೈತರು ವಿಜಯೇಂದ್ರಗೆ ಶುಭಾಶಯ ಕೋರಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ರೈತರು ವಿಜಯೇಂದ್ರಗೆ ಶುಭ ಹಾರೈಸಿದ್ದಾರೆ. ವಿಜಯೇಂದ್ರ ರೈತರ ಪ್ರತಿಭಟನಾ ವೇದಿಕೆ ಮೇಲೆ ಮಲಗಿದ್ದರು. ವಿಜಯೇಂದ್ರರನ್ನ ಮಧ್ಯರಾತ್ರಿ ಎಬ್ಬಿಸಿ ಅನ್ನದಾತರು ವಿಶ್ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಆರತಿ ಬೆಳಗಲು ಬಂದವರನ್ನು ಬಿವೈವಿ ನಿರಾಕರಿಸಿದ್ದಾರೆ.