ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ (85) ಲಂಡನ್‌ನಲ್ಲಿ ನಿಧನ

ನವದೆಹಲಿ: ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ (Gopichand P Hinduja) ಲಂಡನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ನಾಲ್ವರು ಹಿಂದುಜಾ ಸಹೋದರರಲ್ಲಿ ಎರಡನೆಯವರು. ಹಿರಿಯರಾದ ಶ್ರೀಚಂದ್ ಹಿಂದುಜಾ 2023 ರಲ್ಲಿ ನಿಧನರಾದರು. ಇನ್ನಿಬ್ಬರು ಸಹೋದರರಾದ ಪ್ರಕಾಶ್ ಹಿಂದುಜಾ ಮತ್ತು ಅಶೋಕ್ ಹಿಂದುಜಾ ಅವರನ್ನು ಅಗಲಿದ್ದಾರೆ.
ವ್ಯಾಪಾರ ವಲಯದಲ್ಲಿ ‘ಜಿಪಿ’ ಎಂದು ಕರೆಯಲ್ಪಡುವ ಗೋಪಿಚಂದ್ ಹಿಂದುಜಾ 1950 ರಲ್ಲಿ ಕುಟುಂಬ ವ್ಯವಹಾರಕ್ಕೆ ಸೇರಿದರು. ಇಂಡೋ-ಮಧ್ಯಪ್ರಾಚ್ಯ ವ್ಯಾಪಾರ ಕಾರ್ಯಾಚರಣೆಯಿಂದ ಕಂಪನಿಯನ್ನು ಅಂತರರಾಷ್ಟ್ರೀಯ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಬಾಂಬೆ ಜೈ ಹಿಂದ್ ಕಾಲೇಜಿನಿಂದ ಪದವಿ ಪಡೆದ ಗೋಪಿಚಂದ್, ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯ ಮತ್ತು ರಿಚ್ಮಂಡ್ ಕಾಲೇಜಿನಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಹಿಂದುಜಾ ಗ್ರೂಪ್ ಆಟೋಮೋಟಿವ್, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಆರೋಗ್ಯ ರಕ್ಷಣೆ, ರಿಯಲ್ ಎಸ್ಟೇಟ್, ವಿದ್ಯುತ್, ಮಾಧ್ಯಮ ಮತ್ತು ಮನರಂಜನೆ ಸೇರಿದಂತೆ ಹನ್ನೊಂದು ವಲಯಗಳಲ್ಲಿ ವ್ಯವಹಾರಗಳನ್ನು ಹೊಂದಿದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ಅಶೋಕ್ ಲೇಲ್ಯಾಂಡ್, ಇಂಡಸ್ಇಂಡ್ ಬ್ಯಾಂಕ್ ಮತ್ತು NXTDIGITAL ಲಿಮಿಟೆಡ್ ಸೇರಿವೆ.
2021 ರಲ್ಲಿ ಹಿಂದುಜಾ ಕುಟುಂಬವು ಲಂಡನ್ ನ್ಯಾಯಾಲಯ ಮೆಟ್ಟಿಲೇರಿ ಸುದ್ದಿಯಾಗಿತ್ತು. ಶ್ರೀಚಂದ್ ಹಿಂದುಜಾ ಅವರ ಪುತ್ರಿ ವಿನೂ ಮತ್ತು ಶಾನು ತಮ್ಮ ಮೂವರು ಚಿಕ್ಕಪ್ಪಂದಿರು ಹಣಕಾಸು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಿಂದ ತಮ್ಮನ್ನು ಕೈಬಿಟ್ಟಿದ್ದಾರೆಂದು ಆರೋಪಿಸಿದ್ದರು. ಆ ಸಮಯದಲ್ಲಿ ಶ್ರೀಚಂದ್ ಹಿಂದುಜಾ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು