ರಸ್ತೆಗೆ ಕಸ ಎಸೆದು ಕ್ಯಾಮೆರಾ ಮುಂದೆ ಡ್ಯಾನ್ಸ್: ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಅಧಿಕ ಪ್ರಸಂಗ ಮಾಡಿದ ಯುವತಿಯರಿಗೆ ₹1000 ದಂಡ

ಬೆಂಗಳೂರು: ನಗರದಲ್ಲಿ ಕಂಡ ಕಂಡ ಕಡೆ ಕಸ ಬೀಸಾಡುವವರ ವಿರುದ್ಧ ಜಿಬಿಎ ಸಮರ ಸಾರಿದ್ದು, ದಂಡದ ಬಿಸಿ ಮುಟ್ಟಿಸಿದೆ. ಅಂತಹದ್ದೆ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ರಸ್ತೆ ಬದಿ ಯುವತಿಯೊಬ್ಬಳು ಕಸ ಎಸೆದಿದ್ದಾಳೆ. ಮತ್ತೊಬ್ಬಳು ಕ್ಯಾಮೆರಾಗೆ ಕಾಣುವಂತೆ ಡ್ಯಾನ್ಸ್ ಮಾಡಿದ್ದಾಳೆ. ಅಧಿಕ ಪ್ರಸಂಗ ಮಾಡಿದ ಯುವತಿಯರಿಗೆ ಜಿಬಿಎ ದಂಡದ ಬಿಸಿ ಮುಟ್ಟಿಸಿದೆ.

ನಗರದ ಮೈಕೋ ಲೇಔಟ್‌ನಲ್ಲಿ ಕಸ ಎಸೆಯೋದನ್ನ ತಪ್ಪಿಸಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ಆದರೂ, ಯುವತಿಯೊಬ್ಬಳು ಕಸ ತಂದು ಎಸೆದಿದ್ದಾಳೆ. ಮತ್ತೊಬ್ಬ ಯುವತಿ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿ ಮಾರ್ಷಲ್‌ಗಳಿಗೆ ತಗಲಾಕಿಕೊಂಡಿದ್ದಾಳೆ.
ಕಳೆದ ಹಲವು ದಿನಗಳಿಂದ ರಾತ್ರಿ ವೇಳೆ ಕಸ ಎಸೆದು ಹಲವರು, ರಸ್ತೆ ಬದಿಯನ್ನ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದ್ದರು. ಇದು ಸ್ಥಳೀಯರಿಗೆ ಸಮಸ್ಯೆಯನ್ನ ಉಂಟುಮಾಡಿತ್ತು. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಸ ಎಸೆಯುವ ಜಾಗದಲ್ಲಿ ಸ್ಥಳೀಯರೇ ಸಿಸಿಟಿವಿ ಅಳವಡಿಸಿ ಕಸ ಎಸೆಯುವವರ ಪತ್ತೆಗೆ ಮುಂದಾಗಿದ್ದರು. ಅದರಂತೆ ನಿನ್ನೆ ರಾತ್ರಿ ಅದೇ ಜಾಗಕ್ಕೆ ಕೆಲ ಯುವತಿಯರು ಬಂದು ಕಸ ಎಸೆದು, ಕ್ಯಾಮೆರಾ ಮುಂದೆಯೇ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ಗಮನಿಸಿದ ಮನೆಯ ಮಾಲೀಕ ಕೂಡಲೇ ಜಿಬಿಎ ಮಾರ್ಷಲ್‌ಗಳ ಗಮನಕ್ಕೆ ತಂದಿದ್ದಾರೆ. ಮಾರ್ಷಲ್‌ಗಳು ಕೂಡಲೇ ಕಸ ಎಸೆದವರಿಗೆ 1 ಸಾವಿರ ದಂಡ ಹಾಕಿ, ಮುಂದೆ ರಸ್ತೆಯಲ್ಲಿ ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ
ರಸ್ತೆ ಬದಿ ಕಸ ಎಸೆಯುತ್ತಿದ್ದವರಿಗೆ ಸ್ಥಳೀಯರು ಬುದ್ದಿಮಾತು ಹೇಳಿದ್ದರು. ಆದರೆ, ಅವರ ವಿರುದ್ಧವೇ ಕೆಲವರು ಕಿಡಿಕಾರಿದ್ದರು. ಇವರಿಗೆ ತಕ್ಕ ಪಾಠ ಕಲಿಸಬೇಕೆಂದು ಸ್ಥಳೀಯರೇ ಖುದ್ದು ಸಿಸಿ ಕ್ಯಾಮೆರಾ ಹಾಕಿಸಿದ್ದರು. ರಾತ್ರಿ ಹೊತ್ತು ಹಲವರಿಂದ ಕಸ ಎಸೆಯುವ ಪರಿಪಾಠ ಮುಂದುವರಿದಿತ್ತು. ಅವರನ್ನು ಹುಡುಕಿ ದಂಡ ಹಾಕಲಾಗಿದೆ.