ರೇಣುಕಾಸ್ವಾಮಿ ಕೊಲೆ ಪ್ರಕರಣ: ಎರಡನೇ ಬಂಧನದ ಬಳಿಕ ಕೋರ್ಟ್‌ನಲ್ಲಿ ದರ್ಶನ್-ಪವಿತ್ರಾ ಮುಖಾಮುಖಿ!

ಬೆಂಗಳೂರು: ಎರಡನೇ ಬಾರಿ ಬಂಧನದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ಆರೋಪಿಗಳು ನಗರದ ಸೆಷನ್ಸ್ ಕೋರ್ಟ್‌ಗೆ ಹಾಜರಾಗಿದ್ದರು.
ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಹೀಗಾಗಿ ನ್ಯಾಯಾಧೀಶರ ಮುಂದೆ ಸಾಲಾಗಿ ನಿಲ್ಲುವಾಗ ಪವಿತ್ರಾ ಗೌಡ ಹಿಂದೆ ದರ್ಶನ್ ನಿಂತಿದ್ದರು. ಈ ವೇಳೆಯೇ ಮುಂದೆ ಬಾ ಎಂದು ದರ್ಶನ್ ಅವರನ್ನು ಪವಿತ್ರಾ ಗೌಡ ಕರೆದಿದ್ದಾರೆ. ಪವಿತ್ರಾ ಕರೆದ ಬೆನ್ನಲ್ಲೇ ದರ್ಶನ್ ಮುಂದೆ ಹೋಗಿ ಪರಸ್ಪರ ಮಾತನಾಡಿದ್ದಾರೆ.
ಪರಪ್ಪನ ಅಗ್ರಹಾರದಿಂದ ಕೋರ್ಟ್‌ಗೆ ಪೊಲೀಸರು ಕರೆ ತರುವಾಗ ಬೇರೆ ಬೇರೆ ವಾಹನಗಳಲ್ಲಿ ಇಬ್ಬರನ್ನು ಕರೆ ತಂದಿದ್ದರು.
ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳನ್ನು ಆಗಸ್ಟ್ 14 ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು.