10 ದಿನ ಕತ್ತಲೆ ಕೋಣೆಯಲ್ಲಿ ಯಾತನೆ: ನಿತ್ರಾಣಗೊಂಡ ಮಹಿಳೆ, ಮಗುವಿನ ರಕ್ಷಣೆ; ಗಂಡನ ಕುಟುಂಬದ ಸದಸ್ಯರ ಬಂಧನ

ಹೈದರಾಬಾದ್: ಮಹಿಳೆಯೊಬ್ಬಳಿಗೆ ಪುಟ್ಟ ಮಗುವಿತ್ತು. ಆಕೆಗೆ ಆಕೆಯ ಗಂಡ ತನ್ನ ತಮ್ಮನ ಜೊತೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಆದರೆ ಮೈದುನನ ಜೊತೆ ಮಲಗಲು ಆಕೆ ಒಪ್ಪಿರಲಿಲ್ಲ. ಆಕೆಯ ಗಂಡನ ಅಪ್ಪ-ಅಮ್ಮ ಕೂಡ ಸೊಸೆ ತಮ್ಮ ಕಿರಿಯ ಮಗನ ಜೊತೆ ಸಂಬಂಧ (Extramarital Affair) ಹೊಂದಬೇಕೆಂದು ಬಯಸಿದ್ದರು. ಇದಕ್ಕೆ ಆಕೆ ಒಪ್ಪದಿದ್ದಾಗ ಪುಟ್ಟ ಮಗುವಿನ ಜೊತೆ ಆಕೆಯನ್ನು 10 ದಿನ ರೂಂನಲ್ಲಿ ಕೂಡಿಹಾಕಲಾಗಿದೆ.

ಆ ರೂಂನಲ್ಲಿ ಅವರಿಗೆ ಆಹಾರ, ನೀರು, ಕರೆಂಟ್, ಟಾಯ್ಲೆಟ್ ಯಾವ ಸೌಲಭ್ಯವನ್ನೂ ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಆಕೆಯ ಮಗುವಿಗೆ ಕೇವಲ ಎದೆಹಾಲನ್ನು ನೀಡುತ್ತಾ ಆಕೆ 10 ದಿನಗಳ ಕಾಲ ಆ ರೂಂನಲ್ಲಿ ಬಂಧಿಸಲ್ಪಟ್ಟಿದ್ದರು. ಆದರೆ, 10 ದಿನ ಹೊಟ್ಟೆಗೆ ಆಹಾರವಿಲ್ಲದೆ ಎಳೆಮಗುವಿಗೆ ಹಾಲನ್ನೂ ನೀಡುತ್ತಿದ್ದುದರಿಂದ ಆಕೆ ಸಂಪೂರ್ಣ ನಿತ್ರಾಣವಾಗಿದ್ದರು. ಅಲ್ಲದೆ, ಟಾಯ್ಲೆಟ್ ವ್ಯವಸ್ಥೆಯೂ ಇಲ್ಲದಿದ್ದರಿಂದ ಆ ರೂಂನಲ್ಲೇ ಆಕೆ ಮತ್ತು ಆಕೆಯ ಮಗು ಮಲವಿಸರ್ಜನೆ ಮಾಡುವ ಅನಿವಾರ್ಯತೆ ಇತ್ತು. ಅದರ ಜೊತೆಗೇ ಅವರು ಮಲಗಬೇಕಿತ್ತು!
ಈ ರೀತಿಯ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 2 ವರ್ಷಗಳ ಹಿಂದೆ ರಂಜಿತ್ ಎಂಬಾತನನ್ನು ಮದುವೆಯಾಗಿದ್ದ 25 ವರ್ಷದ ಮಹಿಳೆ ತನ್ನ ಅತ್ತೆ, ಮಾವ, ಅತ್ತಿಗೆಯ ಕಿರುಕುಳದಿಂದ ಬೇಸತ್ತಿದ್ದರು. ಆಕೆಗೆ ಹೆಣ್ಣು ಮಗುವಾಗಿತ್ತು. ಆದರೆ, ರಂಜಿತ್ನ ತಮ್ಮ ಪ್ರವೀಣ್ ಜೊತೆ ಸಂಬಂಧ ಬೆಳೆಸಿದರೆ ಆಕೆಗೆ ಗಂಡುಮಗುವಾಗುತ್ತದೆ ಎಂಬ ಕಾರಣಕ್ಕೆ ಅವರೆಲ್ಲರೂ ಆಕೆಯನ್ನು ಪ್ರವೀಣನ ಜೊತೆ ಮಲಗಲು ಒತ್ತಾಯಿಸುತ್ತಿದ್ದರು. ಇದಕ್ಕೆ ಆಕೆ ಒಪ್ಪಿರಲಿಲ್ಲ. ಇದರಿಂದ ಆಕೆಗೆ ಕಿರುಕುಳ ನೀಡಲಾಯಿತು.
ಈ ಪ್ರಕರಣವು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ತಲುಪಿದ ನಂತರ ಇದು ದೇಶಾದ್ಯಂತ ಗಮನ ಸೆಳೆದಿದೆ. ಪೊಲೀಸರು ಆ ಮನೆಗೆ ತೆರಳಿ ಆ ಮಹಿಳೆಯನ್ನು ಕತ್ತಲೆ ಕೋಣೆಯಿಂದ ಬಿಡುಗಡೆ ಮಾಡಿದರು. ನಂತರ ಆ ಕುಟುಂಬದ ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.