ಲಕ್ನೋ: “ಹಿಂದೂ ಯುವಕರು 10 ಮುಸ್ಲಿಂ ಯುವತಿಯರನ್ನು ಮದುವೆಯಾಗಿ; ಉದ್ಯೋಗ ಕೊಡಿಸುತ್ತೇನೆ” – ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕನ ವಿವಾದಾತ್ಮಕ ಹೇಳಿಕೆ

ಲಕ್ನೋ: ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಯುವತಿಯರನ್ನು ಕರೆದುಕೊಂಡು ಬಂದು ಮದುವೆಯಾಗಿ ಎಂದು ಬಿಜೆಪಿ ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಯುವತಿಯರೊಂದಿಗೆ ಓಡಿಹೋದ ಯಾವುದೇ ಹಿಂದೂ ಯುವಕರಿಗೆ ಉದ್ಯೋಗ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಹಿಂದೂಗಳು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂದು ಉತ್ತರ ಪ್ರದೇಶದ ಮಾಜಿ ಶಾಸಕ ನಾಲಿಗೆ ಹರಿಬಿಟ್ಟಿದ್ದಾರೆ.
ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್‌ನ ಮಾಜಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್, ಕ್ಷೇತ್ರದ ಧಂಖರ್‌ಪುರ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಇಬ್ಬರು ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಬಲವಂತವಾಗಿ ಮದುವೆಯಾಗಿಸಿ ಮತಾಂತರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಶಾಸಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಹುಡುಗಿಯೊಂದಿಗೆ ಓಡಿಹೋದ ಯಾವುದೇ ಹಿಂದೂವಿನ ಮದುವೆಯನ್ನು ನಾನು ಮುಂದೆ ನಿಂತು ಮಾಡಿಸುತ್ತೇನೆ. ಅವರಿಗೆ ಉದ್ಯೋಗ ವ್ಯವಸ್ಥೆಯನ್ನೂ ಮಾಡುತ್ತೇನೆ ಎಂದು ಸಿಂಗ್ ತಿಳಿಸಿದ್ದಾರೆ.
ಈಗ ಅಖಿಲೇಶ್ ಯಾದವ್ ಅವರ ಆಡಳಿತ ಇಲ್ಲ. ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಂ ಹುಡುಗರು ಇಬ್ಬರು ಹಿಂದೂ ಹುಡುಗಿಯರನ್ನು ಮದುವೆಯಾಗಿರುವ ವಿಚಾರ ಅಲ್ಲಿಗೆ ನಿಲ್ಲುವುದಿಲ್ಲ. ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಹುಡುಗಿಯರನ್ನು ಕರೆತಂದು ಮದುವೆಯಾಗಬೇಕು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.
ದುಮಾರಿಯಾಗಂಜ್ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ, ಇಲ್ಲಿನ ಜನರ ಭಯಕ್ಕೆ ಕಡಿವಾಣ ಬಿದ್ದಿದೆ. ಇಲ್ಲದಿದ್ದರೆ, ಹಿಂದೂಗಳು ಭಯದಿಂದ ವಾಸಿಸುತ್ತಿದ್ದ ಹಲವಾರು ಹಳ್ಳಿಗಳಿದ್ದವು. ಅವರ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಸುರಕ್ಷಿತವಾಗಿರಲಿಲ್ಲ. ಧಂಖರ್‌ಪುರ ಗ್ರಾಮದಲ್ಲಿ ಮುಸ್ಲಿಂ ಬಹುಸಂಖ್ಯಾತರಿದ್ದು, ಒಂದು ವಾರದಲ್ಲಿ ಇಬ್ಬರು ಹಿಂದೂಗಳನ್ನು ಆಮಿಷವೊಡ್ಡಿ ಇಸ್ಲಾಂಗೆ ಮತಾಂತರಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕನ ಹೇಳಿಕೆಗಳನ್ನು ಸಮಾಜವಾದಿ ಪಕ್ಷ ಖಂಡಿಸಿದೆ. ಕೋಮು ಸಾಮರಸ್ಯವನ್ನು ಕದಡಲು ಪದೇ ಪದೇ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.