ಭಾರತದಲ್ಲಿ HAL ನಿಂದ ಪ್ರಯಾಣಿಕ ವಿಮಾನ ತಯಾರಿಕೆ; ರಷ್ಯಾದೊಂದಿಗೆ HAL ಒಪ್ಪಂದ

ನವದೆಹಲಿ: ಭಾರತದ ಸ್ವಾವಲಂಬನೆಯ ಹಾದಿ ಮತ್ತಷ್ಟು ಸುಗಮಗೊಳ್ಳಲು ಸಹಕಾರಿಯಾಗುವಂತಹ ಬೆಳವಣಿಗೆ ಆಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಹಾಗೂ ರಷ್ಯಾದ ಯುನೈಟೆಡ್ ಏರ್ಕ್ರಾಫ್ಟ್ ಕಾರ್ಪೊರೇಶನ್ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ (MoU) ಏರ್ಪಟ್ಟಿದೆ. ಇದರ ಪ್ರಕಾರ ಭಾರತದಲ್ಲಿ ಎಸ್ಜೆ-100 (SJ-100 passenger aircraft) ಎನ್ನುವ ಪ್ಯಾಸೆಂಜರ್ ವಿಮಾನವನ್ನು ತಯಾರಿಸಲಾಗುತ್ತದೆ. ಮಾಸ್ಕೋದಲ್ಲಿ ಅಕ್ಟೋಬರ್ 27ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಚ್ಎಎಲ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರೊಂದಿಗೆ ಭಾರತೀಯ ಕಂಪನಿಯೊಂದು 3-4 ದಶಕಗಳ ನಂತರ ಮೊದಲ ಬಾರಿಗೆ ಪರಿಪೂರ್ಣ ಪ್ರಯಾಣಿಕ ವಿಮಾನ ತಯಾರಿಕೆ ಮಾಡುವ ಅವಕಾಶ ಸಿಕ್ಕಂತಾಗಿದೆ. 1961ರಿಂದ 1988ರವರೆಗೂ ಯುನೈಟೆಡ್ ಕಿಂಗ್ಡಂನ ಆವ್ರೋ ಕಂಪನಿಯ ಎಚ್ಎಸ್748 ಎನ್ನುವ ವಿಮಾನವನ್ನು ಇದೇ ಎಚ್ಎಎಲ್ ಸಹಯೋಗದಲ್ಲಿ ಭಾರತದಲ್ಲಿ ತಯಾರಿಸಲಾಗಿತ್ತು. 1988ರಲ್ಲಿ ಈ ವಿಮಾನದ ಉತ್ಪಾದನೆ ನಿಂತುಹೋಗಿತ್ತು. ಈಗ ರಷ್ಯನ್ ಕಂಪನಿಯ ಸಹಯೋಗದಲ್ಲಿ ಇದೇ ಎಚ್ಎಎಲ್ ಮತ್ತೊಂದು ವಿಮಾನ ತಯಾರಿಕೆಗೆ ಕೈಹಾಕಿರುವುದು ಗಮನಾರ್ಹ
ಯಾವುದಿದು ಎಸ್ಜೆ-100 ವಿಮಾನ?
ಎಸ್ಜೆ-100 ಅಥವಾ ಸುಖೋಯ್ ಸೂಪರ್ ಜೆಟ್-100 ವಿಮಾನದ ತಯಾರಿಕೆ ಕಳೆದ 20 ವರ್ಷಗಳಿಂದ ಆಗುತ್ತಿದೆ. ಸದ್ಯ 200ಕ್ಕೂ ಹೆಚ್ಚು ಈ ವಿಮಾನಗಳನ್ನು ತಯಾರಿಸಲಾಗಿದೆ. 16ಕ್ಕೂ ಅಧಿಕ ಏರ್ಲೈನ್ ಕಂಪನಿಗಳು ಈ ವಿಮಾನಗಳನ್ನು ಬಳಸುತ್ತಿವೆ.
ಈ ಎಸ್ಜೆ-100 ವಿಮಾನದಲ್ಲಿ ಸುಮಾರು 87ರಿಂದ 101 ಪ್ರಯಾಣಿಕರು ಕೂರಬಹುದು. ಈ ಲಘು ವಿಮಾನಗಳು ಭಾರತದ ಪ್ರಾದೇಶಿಕ ವೈಮಾನಿಕ ನೆಟ್ವರ್ಕ್ ವೃದ್ಧಿಸಲು ಸಹಕಾರಿಯಾಗಲಿವೆ. ಸರ್ಕಾರದ ಉಡಾನ್ ಸ್ಕೀಮ್ನಲ್ಲಿ ವಿವಿಧ ಪಟ್ಟಣಗಳ ಮಧ್ಯೆ ವಿಮಾನ ಸಂಪರ್ಕ ಸಾಧಿಸುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಇಂಥ ಸಣ್ಣ ವಿಮಾನಗಳಿಗೆ ಬೇಡಿಕೆ ಇದೆ. ಒಂದು ಅಂದಾಜು ಪ್ರಕಾರ ಮುಂದಿನ ಒಂದು ದಶಕದಲ್ಲಿ 200ಕ್ಕೂ ಅಧಿಕ ಸಣ್ಣ ವಿಮಾನಗಳು ಭಾರತದಲ್ಲಿ ಅಗತ್ಯ ಬೀಳಲಿವೆ.
ಈ ಕಾರಣಕ್ಕೆ ಎಚ್ಎಎಲ್ನಿಂದ ಎಸ್ಜೆ-100 ವಿಮಾನ ತಯಾರಿಕೆ ಆಗುತ್ತಿರುವುದು ಮಹತ್ವದ ಸಂಗತಿ. ಹಾಗೆಯೇ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸರ್ಕಾರದ ಕನಸು ಈಡೇರಲು ಇದು ಒಂದು ಪ್ರಮುಖ ಹೆಜ್ಜೆಯೂ ಹೌದು. ಭಾರತದ ವಿಮಾನಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯ ಎನಿಸುತ್ತದೆ.