ಕನ್ನಡ ಕಿರುತೆರೆ ನಟಿ ವಿರುದ್ಧ ಬ್ಲ್ಯಾಕ್ಮೇಲ್ ಆರೋಪ: ಸ್ನೇಹಿತೆಯ ಖಾಸಗಿ ವಿಡಿಯೋ, ಫೋಟೋ ಕದ್ದು ಹಂಚಿದ ನಟಿ ಆಶಾ ಜೋಯಿಸ್ ವಿರುದ್ಧ ಪ್ರಕರಣ ದಾಖಲು

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಖ್ಯಾತ ಕಿರುತೆರೆ ನಟಿ ವಿರುದ್ಧ ಈಗ ಬ್ಲ್ಯಾಕ್ಮೇಲ್ (BlackMali) ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಸ್ನೇಹಿತೆಯ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನ ಕದ್ದು ಹಂಚಿಕೆ ಮಾಡಿದ್ದಾರೆ ಹಾಗೂ 2 ಕೋಟಿ ರೂ.ಗೆ ಬ್ಲ್ಯಾಕ್ಮೇಲ್ ಮಾಡಲು ಪ್ರಚೋದನೆ ನೀಡಿದ ಆರೋಪದ ಮೇಲೆ ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬ ಸದಸ್ಯೆ ಹಾಗೂ ಕಿರುತೆರೆ ನಟಿ ಆಶಾ ಜೋಯಿಸ್ (Asha Jois) ವಿರುದ್ಧ ಪ್ರಕರಣ ದಾಖಲಾಗಿದೆ. 61 ವರ್ಷದ ಪಾರ್ವತಿ ಎಂಬವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಆಶಾ 2016ರಲ್ಲಿ ಮಿಸ್ ಇಂಡಿಯಾ ಪ್ಲಾನೆಟ್ ಸ್ಪರ್ಧಿಯಾಗಿದ್ದರು.
ಗಂಡನ ಬ್ಲ್ಯಾಕ್ಮೇಲ್ಗೆ ನಟಿಯಿಂದ ಪ್ರಚೋದನೆ!
ಕೆಲ ದಿನಗಳ ಹಿಂದೆ ಪಾರ್ವತಿಗೆ ಆಶಾ ಜೋಯಿಸ್ ಪರಿಚಯವಾಗಿದೆ. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಹಾಗೂ ಸೀರಿಯಲ್ ನಟಿ ಅಂತ ಹೇಳಿಕೊಂಡು ಪರಿಚಯವಾಗಿದ್ದಳು. ಪಾರ್ವತಿ ತಾನು ಕೆಲಸ ಮಾಡುವ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು. ಈ ವಿಚಾರ ತಿಳಿದ ಆಶಾ ಪತಿಗೆ ಬ್ಲ್ಯಾಕ್ ಮೇಲ್ ಮಾಡಲು ಪದೇ ಪದೇ ಪ್ರಚೋದನೆ ನೀಡಿದ್ದಾಳೆ.
ಎರಡು ಕೋಟಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡಲು ಬಲವಂತ ಮಾಡ್ತಿದ್ದಳಂತೆ. ಇದನ್ನ ಪಾರ್ವತಿ ನಿರಾಕರಿಸಿದ್ದರು. ಇದೇ ದ್ವೇಷಕ್ಕೆ ಪಾರ್ವತಿ ಅವರ ಫೋನ್ನಿಂದ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಖಾಸಗಿ ಫೋಟೋಗಳನ್ನ ಕದ್ದು ಪಾವರ್ತಿ ಅವರ ಪರಿಚಯಸ್ಥರಿಗೆ ಕಳಿಸಿದ್ದಾಳೆ. ಈ ಹಿನ್ನೆಲೆ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾ ಕದ್ದಿದ್ದಾರೆ ಎಂದು ಆರೋಪಿಸಿ ಪಾರ್ವತಿ ದೂರು ನೀಡಿದ್ದಾರೆ.
ನಟಿಯ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.