ದೀಪಾವಳಿ ಮಧ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ವಾಯು ಗುಣಮಟ್ಟದಲ್ಲಿ ಶೇ. 44ರಷ್ಟು ಸುಧಾರಣೆ!

ಬೆಂಗಳೂರು: ನಗರದಲ್ಲಿ ಮೂರು ದಿನಗಳ ದೀಪಾವಳಿ ಆಚರಣೆ ಮುಕ್ತಾಯಗೊಂಡಿದ್ದು, ಮೂರು ದಿನಗಳ ಹಬ್ಬದ ಆಚರಣೆ ನಡುವಲ್ಲೂ ನಗರದಲ್ಲಿ ಗುಣಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಆಂಬಿಯೆಂಟ್ ಏರ್ ಕ್ವಾಲಿಟಿ ಮಾನಿಟರಿಂಗ್ ಸ್ಟೇಷನ್ (ಸಿಎಎಕ್ಯೂಎಂಎಸ್) ನೀಡಿರುವ ಮಾಹಿತಿ ಪ್ರಕಾರ, ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಶೇ. 44ರಷ್ಟು ಸುಧಾರಣೆಯಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ. 5ರಷ್ಟು ಉತ್ತಮಗೊಂಡಿದೆ. ಕಳೆದ ವರ್ಷ (2024) ದೀಪಾವಳಿ ಸಮಯದಲ್ಲಿ ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 120ರಷ್ಟಿತ್ತು, ಆದರೆ, ಈ ಬಾರಿ ಅದು ಕೇವಲ 83ಕ್ಕೆ ಇಳಿದಿದೆ ಎಂದು ತಿಳಿಸಿದೆ.
ನಗರದಲ್ಲಿರುವ 11 ಮಾನಿಟರಿಂಗ್ ಸ್ಟೇಷನ್‌ಗಳಲ್ಲಿ ಮೂರು ದಿನಗಳ ದತ್ತಾಂಶಗಳ ಪ್ರಕಾರ ಹೆಬ್ಬಾಳದಲ್ಲಿ ವಾಯುಮಾಲಿನ್ಯ ಶೇ. 179 ರಷ್ಟು ಕಡಿಮೆಯಾಗಿರುವುದನ್ನು ನಿಮ್ಹಾನ್ಸ್’ನಲ್ಲಿ ಶೇ. 62 ರಷ್ಟು ಮತ್ತು ಜಿಗಣಿ ಶೇ. 60 ರಷ್ಟು ಕುಸಿತವಾಗಿರುವುದಾಗಿ ತಿಳಿದುಬಂದಿದೆ. ಸಾಣೆಗುರುವನಹಳ್ಳಿ ಮಾತ್ರ ವಾಯು ಮಾಲಿನ್ಯ ಮಟ್ಟದಲ್ಲಿ ಶೇ. 2ರಷ್ಟು ಸ್ವಲ್ಪ ಹೆಚ್ಚಳವನ್ನು ದಾಖಲಿಸಿದೆ.
ದೀಪಾವಳಿಯ ಮೊದಲ ದಿನ (ಅಕ್ಟೋಬರ್ 20) ಅತ್ಯಂತ ಶುದ್ಧ ಗಾಳಿಯ ಗುಣಮಟ್ಟವನ್ನು ಕಂಡಿದ್ದು, ವಾಯುಮಾಲಿನ್ಯ ಶೇ.98ರಷ್ಟು ಕುಸಿತವಾಗಿರುವುದು ಕಂಡು ಬಂದಿದೆ. ಕಳೆದ ವರ್ಷದ ಇದೇ ದಿನಶೇ.153ರಷ್ಟಿತ್ತು. ಆದಾಗ್ಯೂ, ಎರಡನೇ ಮತ್ತು ಮೂರನೇ ದಿನಗಳಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಹದಗೆಟ್ಟಿದ್ದು, ಮೂರನೇ ದಿನ 2024 ರ ಮಟ್ಟಕ್ಕಿಂತ ಶೇ. 7 ರಷ್ಟು ಮಾತ್ರ ಕುಸಿತವಾಗಿರುವುದು ಕಂಡು ಬಂದಿದೆ.
ಅಕ್ಟೋಬರ್ 19 ರಂದು ದೀಪಾವಳಿ ಪೂರ್ವದ ಪರಿಸ್ಥಿತಿಗಳಿಗೆ ಹೋಲಿಸಿದರೆ, ಹಬ್ಬದ ಸಮಯದಲ್ಲಿ ಮಾಲಿನ್ಯ ಮಟ್ಟವು ಶೇ.5 ರಷ್ಟು ಕುಸಿತ ಕಂಡಿದೆ. ಇದು ಸಕಾರಾತ್ಮಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ.
ಒಂದೆಡೆ ವಾಯು ಮಾಲಿನ್ಯ ಕಡಿಮೆಯಾಗಿದ್ದರೆ, 5 ಕೇಂದ್ರಗಳಲ್ಲಿ ಶಬ್ದ ಮಾಲಿನ್ಯ ಮಟ್ಟ ಹೆಚ್ಚಾಗಿರುವುದು ಕಂಡು ಬಂದಿದೆ.