5 ಲಕ್ಷಕ್ಕೂ ಹೆಚ್ಚು ಮಾನವ ಉದ್ಯೋಗಗಳನ್ನು ರೋಬೋಟ್‌ಗಳಿಂದ ಬದಲಾಯಿಸಲು ಸಿದ್ಧತೆ

ನ್ಯೂಯಾರ್ಕ್: ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ , ತನ್ನ ಕಾರ್ಯಾಚರಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ 5 ಲಕ್ಷಕ್ಕೂ ಅಧಿಕ ಮಾನವ ಉದ್ಯೋಗಗಳನ್ನು ರೋಬೋಟ್‌ಗಳಿಂದ ಬದಲಾಯಿಸಲು ಕಂಪನಿ ಬೃಹತ್ ಯೋಜನೆ ರೂಪಿಸಿದೆ.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ ಆಂತರಿಕ ದಾಖಲೆಗಳ ಪ್ರಕಾರ, ಕಂಪನಿಯ ಶೇ. 75ರಷ್ಟು ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸುವುದು ಜೆಫ್ ಬೆಜೋಸ್ ಸ್ಥಾಪಿಸಿರುವ ಅಮೆಜಾನ್ ಕಂಪನಿಯ ಗುರಿಯಾಗಿದೆ.
ಈ ಯೋಜನೆಯ ಪ್ರಕಾರ, 2027ರ ವೇಳೆಗೆ ಅಮೆರಿಕ ಒಂದರಲ್ಲೇ ಸುಮಾರು 1,60,000 ಹೊಸ ನೇಮಕಾತಿಗಳನ್ನು ತಪ್ಪಿಸಬಹುದಾಗಿದೆ. ಇದರಿಂದ ಕಂಪನಿಯು ಪ್ಯಾಕ್ ಮಾಡಿ ವಿತರಿಸುವ ಪ್ರತಿ ವಸ್ತುವಿನ ಮೇಲೆ ಸುಮಾರು 30 ಸೆಂಟ್ಸ್ (26 ರೂ.) ಉಳಿತಾಯ ಮಾಡಲಿದೆ. 2033ರ ವೇಳೆಗೆ ಮಾರಾಟವನ್ನು ದ್ವಿಗುಣಗೊಳಿಸಿದರೂ, ಸುಮಾರು 6,00,000 ಹೊಸ ನೇಮಕಾತಿಗಳನ್ನು ತಪ್ಪಿಸುವುದು ಕಂಪನಿಯ ದೀರ್ಘಾವಧಿ ಗುರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಅಮೆಜಾನ್ ವಿಶ್ವಾದ್ಯಂತ ಸುಮಾರು 12 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.
ಈ ದೊಡ್ಡ ಬದಲಾವಣೆಯಿಂದ ಉಂಟಾಗಬಹುದಾದ ಸಾರ್ವಜನಿಕರ ವಿರೋಧ ಮತ್ತು ಟೀಕೆಗಳನ್ನು ತಪ್ಪಿಸಲು ಅಮೆಜಾನ್ ಈಗಾಗಲೇ ಸಿದ್ಧತೆ ನಡೆಸಿದೆ. ‘ಆಟೋಮೇಷನ್’ ಅಥವಾ ‘ಕೃತಕ ಬುದ್ಧಿಮತ್ತೆ’ ಎಂಬ ಪದಗಳ ಬದಲಿಗೆ ‘ಸುಧಾರಿತ ತಂತ್ರಜ್ಞಾನ’ ಎಂಬ ಪದವನ್ನು ಬಳಸಲು ಕಂಪನಿ ನಿರ್ಧರಿಸಿದೆ. ಅದೇ ರೀತಿ, ‘ರೋಬೋಟ್’ಗಳಿಗೆ ಬದಲಾಗಿ ‘ಕೋಬೋಟ್ಸ್’ ಅಂದರೆ, ಮಾನವರು ಮತ್ತು ರೋಬೋಟ್‌ಗಳ ಸಹಯೋಗ ಎಂದು ಬಿಂಬಿಸಲು ಸಜ್ಜಾಗಿದೆ.
ಇದರ ಜೊತೆಗೆ, ಸಮುದಾಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ‘ಉತ್ತಮ ಕಾರ್ಪೊರೇಟ್ ಸಂಸ್ಥೆ’ ಎಂಬ ವರ್ಚಸ್ಸನ್ನು ನಿರ್ಮಿಸಿಕೊಳ್ಳುವ ತಂತ್ರವನ್ನೂ ಅಮೆಜಾನ್ ರೂಪಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.
ಆದಾಗ್ಯೂ, ಈ ವರದಿಗೆ ಪ್ರತಿಕ್ರಿಯಿಸಿರುವ ಅಮೆಜಾನ್ ವಕ್ತಾರೆ ಕೆಲ್ಲಿ ನ್ಯಾಂಟೆಲ್, “ಈ ದಾಖಲೆಗಳು ಕಂಪನಿಯೊಳಗಿನ ಕೇವಲ ಒಂದು ಗುಂಪಿನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ,” ಎಂದು ಹೇಳಿದ್ದಾರೆ. ಅಲ್ಲದೆ, ಮುಂಬರುವ ಹಬ್ಬದ ಋತುವಿಗಾಗಿ 2,50,000 ಜನರನ್ನು ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ ಎಂದು ತಿಳಿಸಿದ್ದಾರೆ. ಆದರೆ, ಬಹುಮುಖ್ಯವಾಗಿ ಈ ನೇಮಕಾತಿಗಳು ಖಾಯಂ ಸ್ವರೂಪದ್ದೋ ಅಥವಾ ಗುತ್ತಿಗೆ ಆಧಾರಿತವೋ ಎಂಬುದರ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ.
ಅಮೆಜಾನ್ 2012ರಲ್ಲಿ ರೋಬೋಟಿಕ್ಸ್ ಕಂಪನಿ ಕಿವಾವನ್ನು 775 ಮಿಲಿಯನ್ ಡಾಲರ್‌ಗೆ ಖರೀದಿಸುವ ಮೂಲಕ ಈ ವಲಯಕ್ಕೆ ಮೊದಲ ಬಾರಿಗೆ ಕಾಲಿಟ್ಟಿತ್ತು