ಆಧುನಿಕತೆಯ ನಡುವೆಯೂ ನಿಲ್ಲದ ಸಂಪ್ರದಾಯ: ದೀಪಾವಳಿ ಪಾಡ್ಯದಂದು ಮನೆ ಮುಂದೆ ‘ಸಗಣಿ ಪಾಂಡವರ’ ಪ್ರತಿಷ್ಠಾಪಿಸಿ ಪೂಜೆ ಮಾಡಿದ ಬಾಗಲಕೋಟೆ ಹೆಂಗಳೆಯರು

ಬಾಗಲಕೋಟೆ: ದೀಪಾವಳಿ (Deepavali) ಹಬ್ಬದ ಸಂಭ್ರಮದ ಮಧ್ಯೆ ಮನೆ ಮನೆ ಎದುರು ಪ್ರತಿವರ್ಷ ದೀಪಾವಳಿ ಪಾಡ್ಯ ದಿನದಂದು ಸಗಣಿ ಪಾಂಡವರ (Sagani Pandavaru) ರೂಪಕ ಗಮನ ಸೆಳೆಯುತ್ತವೆ.

ಆಧುನಿಕತೆಯ ಭರಾಟೆಯ ಮಧ್ಯೆಯೂ ಸಾಂಪ್ರದಾಯಿಕ ಸಗಣೆ ಪಾಂಡವರ ಆಚರಣೆ ನಿಂತಿಲ್ಲ. ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೆಂಗಳೆಯರು ಬೆಳ್ಳಂಬೆಳಿಗ್ಗೆ ಮನೆ ಎದುರು ಸಗಣಿ ಪಾಂಡವರ ಪ್ರತಿಷ್ಠಾಪಿಸಿ ವನವಾಸ ಮುಗಿಸಿ ಮರಳಿದ ಪಾಂಡವರ ಇತಿಹಾಸದ ನೆನಪಿಗಾಗಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ.
ಸಗಣಿ ಪಾಂಡವರಿಗೆ ಉತ್ತರಾಣಿ ಕಡ್ಡಿ, ಹೂವಿನೊಂದಿಗೆ ವಿಶೇಷವಾಗಿ ಶ್ಯಾವಿಗೆ ಪಾಯಸ ಮಾಡಿ ನೈವೇದ್ಯ ಇಡಲಾಗುತ್ತದೆ. ಜೊತೆಗೆ ಹೊಸ ವಾಹನಗಳಿಗೆ ಪೂಜೆಯೊಂದಿಗೆ ಪಾಡ್ಯ ಸಂಭ್ರಮಿಸುತ್ತಿದ್ದಾರೆ.
ಏನಿದು ಸಗಣಿ ಪಾಂಡವರು?
ಸಗಣಿ ಪಾಂಡವರು ಎಂದರೆ ಉತ್ತರ ಕರ್ನಾಟಕದಲ್ಲಿ ದೀಪಾವಳಿ ಪಾಡ್ಯದಂದು ಸಗಣಿಯಿಂದ ತಯಾರಿಸುವ ಐದು ಪಾಂಡವರ ಪ್ರತಿಕೃತಿಗಳು. ಮಹಾಭಾರತದ ಪಾಂಡವರು ಪಟ್ಟ ಕಷ್ಟಗಳು ಯಾರಿಗೂ ಬಾರದಿರಲಿ ಎಂದು ಪ್ರಾರ್ಥಿಸುತ್ತಾ, ಸಗಣಿಯ ಪಾಂಡವರನ್ನು ಪೂಜಿಸಿ, ಅವರಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ಇದಾಗಿದೆ. ಇದು ದನಗಳಿಗೆ, ದನದ ಕೊಟ್ಟಿಗೆಗೆ ರೈತಾಪಿ ಜನರು ತೋರುವ ಗೌರವವನ್ನೂ ಸೂಚಿಸುತ್ತದೆ.
ಪಾಂಡವರನ್ನು ಮನೆ ಬಾಗಿಲಿನ ಅಕ್ಕಪಕ್ಕ ಅಥವಾ ಮೇಲ್ಛಾವಣಿಯ ಮೇಲೆ ಇಟ್ಟು, ಪೂಜೆ ಸಲ್ಲಿಸಲಾಗುತ್ತದೆ. ಮನೆಯ ಬಾಗಿಲಲ್ಲಿ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸಲಾಗುತ್ತದೆ. ಉತ್ತರಾಣಿ ಕಡ್ಡಿ, ಹಳದಿ ಹೂವು, ಅನ್ನ, ಮೊಸರು, ಕಬ್ಬು, ಜೋಳದ ದಂಟಿನಿಂದ ಮಾಡಿದ ವಿಶೇಷ ಖಾದ್ಯಗಳನ್ನು ಪಾಂಡವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ದನಗಳ ಮೈಯಲ್ಲಿ ಸಿಗುವ ಸಗಣಿಯನ್ನು ಪವಿತ್ರವೆಂದು ಭಾವಿಸಿ ಗೌರವಿಸುವುದು ಇದರ ಉದ್ದೇಶವಾಗಿದೆ.