ದೀಪಾವಳಿ ಮೊದಲ ದಿನ ಪಟಾಕಿ ಅನಾಹುತ: 15 ವರ್ಷದೊಳಗಿನ ಐವರು ಮಕ್ಕಳಿಗೆ ಗಂಭೀರ

ಬೆಂಗಳೂರು: ಕರ್ನಾಟಕದಾದ್ಯಂತ ದೀಪಾವಳಿ ಹಬ್ಬದ (deepavali festival) ಸಡಗರ ಹಾಗೂ ಸಂಭ್ರಮ ಜೋರಾಗಿದೆ. ಆದರೆ ಇದೇ ಬೆಳಕಿನ ಹಬ್ಬ ಅದೆಷ್ಟೋ ಜನರ ಬಾಳನ್ನು ಕತ್ತಲಾಗಿಸುತ್ತದೆ. ಹಬ್ಬದ ಮೊದಲ ದಿನವೇ ಪಟಾಕಿ (fire crackers) ಹೊಡೆಯುವ ಭರದಲ್ಲಿ ಐವರ ಮಕ್ಕಳು ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ಅದರಲ್ಲೂ ಮಕ್ಕಳು ಕಣ್ಣಿಗೆ ಹಾನಿ ಮಾಡಿಕೊಂಡಿರುವಂತಹ ಘಟನೆಗಳು ನಡೆದಿವೆ. ಸದ್ಯ ಎಲ್ಲರೂ ಚಿಕಿತ್ಸೆ ಪಡೆದುಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಟಾಕಿ ಹೊಡೆಯುವ ಮುನ್ನ ಎಚ್ಚರ!
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಅದೆಷ್ಟೋ ಜನರು ದುಬಾರಿಯಾದರೂ ಪಟಾಕಿನ ಖರೀದಿಸಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಅದೇ ಪಟಾಕಿಯಿಂದ ಅದೆಷ್ಟೋ ಜನರು ಸುಟ್ಟುಕೊಂಡು ಅಥವಾ ಪಟಾಕಿ ಸಿಡಿದು ಕಣ್ಣುಗಳಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವುದೇನು ಹೊಸದೇನಲ್ಲ. ಅದರಲ್ಲೂ ಮೊದಲ ದಿನವೇ ಪಟಾಕಿಯಿಂದ ಕಣ್ಣಿಗೆ ಪೆಟ್ಟಾದ ಐವರು ಮಕ್ಕಳು ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಇವರೆಲ್ಲರೂ 15 ವರ್ಷದೊಳಗಿನ ಮಕ್ಕಳೇ ಅಂತಿದ್ದಾರೆ ವೈದ್ಯರು.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 14 ವರ್ಷದ ಹಾಗೂ 12 ವರ್ಷದ ಮಕ್ಕಳಿಬ್ಬರು ಗಾಯಗೊಂಡು ಚಿಕಿತ್ಸೆ ಪಡೆದರೆ, ನಾರಾಯಣ ನೇತ್ರಾಲಯದಲ್ಲಿ 3 ವರ್ಷ, 4 ವರ್ಷ ಹಾಗೂ 14 ವರ್ಷದ ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಈ ಐವರಲ್ಲಿ ಇಬ್ಬರು ಸ್ವತಃ ಪಟಾಕಿ ಹಚ್ಚಿ ಗಾಯಗೊಂಡರೆ, ಇನ್ನುಳಿದ ಮೂವರು ಹಚ್ಚಿದ ಪಟಾಕಿ ನೋಡುವಾಗ ಗಾಯಗೊಂಡಿರುವುದಾಗಿ ಮಿಂಟೋ ಕಣ್ಣಿನ ಆಸ್ಪತ್ರೆಯ ಡಾ. ಶಶಿಧರ್ ಮಾಹಿತಿ ನೀಡಿದ್ದಾರೆ.
ಪಟಾಕಿ ಹಚ್ಚುವಾಗ ತೆಗೆದುಕೊಳ್ಳಬೇಕಾದ ಕ್ರಮಗಳು ಏನು?
- ಪಟಾಕಿ ಹೊಡೆಯುವಾಗ ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಅಥವಾ ಬೆಂಕಿ ನಂದಿಸುವ ಉಪಕರಣವನ್ನು ಇಟ್ಟುಕೊಳ್ಳುವುದು.
- ಪಟಾಕಿಗಳನ್ನು ಹಚ್ಚಿದ ನಂತರ ಬೇಗನೆ ದೂರ ಸರಿಯುವುದು.
- ಕಣ್ಣುಗಳನ್ನು ಪಟಾಕಿಯ ಕಿಡಿಗಳಿಂದ ಮತ್ತು ಸಿಡಿಯುವಿಕೆಗಳಿಂದ ರಕ್ಷಿಸಲು ಸುರಕ್ಷಿತಾ ಕನ್ನಡಕಗಳನ್ನು ಧರಿಸುವುದು.
- ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಪಕ್ಕದಲ್ಲಿ ನಿಂತು ಗಮನಿಸುವುದು ಮತ್ತು ಹೇಗೆ ಪಟಾಕಿ ಹೊಡೆಯುವುದು ಎಂದು ಹೇಳಿಕೊಡುವುದು.
- ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಾದ ಒಣಗಿರುವ ಎಲೆಗಳು ಅಥವಾ ವಾಹನಗಳು ಇಲ್ಲದ ಸ್ಥಳದಲ್ಲಿ ಪಟಾಕಿ ಹೊಡೆಯುವುದು ಸೂಕ್ತ.
ಪಟಾಕಿ ಹೊಡೆಯುವಾಗ ಏನು ಮಾಡಬಾರದು?
- ವಿಫಲವಾದ, ಹತ್ತದಿರುವ ಪಟಾಕಿಗಳು, ಹೂವಿನ ಕುಂಡ, ಭೂಚಕ್ರ ಮುಂತಾದವುಗಳನ್ನು ಪುನಃ ಹೊತ್ತಿಸಬೇಡಿ, ಅವುಗಳನ್ನು ನೀರಿನಲ್ಲಿ ಎಸೆಯುವ ಮುನ್ನ 20 ನಿಮಿಷ ಕಾಯಿರಿ.
- ಜನರು, ಪ್ರಾಣಿಗಳು ಅಥವಾ ವಾಹನಗಳ ಮೇಲೆ ಎಂದಿಗೂ ಪಟಾಕಿಗಳನ್ನು ಎಸೆಯಬೇಡಿ.
- ಬಾಟಲಿಗಳು ಅಥವಾ ಮಡಕೆಗಳಂತಹ ವಸ್ತುಗಳನ್ನು ಪಟಾಕಿಗಳ ಮೇಲೆ ಮುಚ್ಚುವ ಮೂಲಕ ಪಟಾಕಿ ಸದ್ದನ್ನು ಹೆಚ್ಚಿಸಬೇಡಿ.
- ಪಟಾಕಿ ಹಚ್ಚುವಾಗ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸಬೇಡಿ, ಕನ್ನಡಕ ಧರಿಸಿ.
- ಏಕಕಾಲದಲ್ಲಿ ಅನೇಕ ಪಟಾಕಿಗಳನ್ನು ಹಚ್ಚಬೇಡಿ
ಕಣ್ಣಿಗೆ ಕಿಡಿ ಹಾರಿದರೆ ತೆಗೆದುಕೊಳ್ಳಬೇಕಾದ ಕ್ರಮವೇನು?
ಇನ್ನು ಕಣ್ಣಿಗೆ ಕಿಡಿ ಹಾರಿದರೆ ತೆಗೆದುಕೊಳ್ಳಬೇಕಾದ ಕ್ರಮವೇನು ಎಂಬುವುದರ ಕುರಿತಾಗಿ ನಾರಾಯಣ ನೇತ್ರಾಲಯದ ಡಾ. ನರೇನ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಕಣ್ಣುಗಳನ್ನು ಉಜ್ಜಬಾರದು, ಕನಿಷ್ಠ 15 ನಿಮಿಷ ಶುದ್ಧ ನೀರಿನಿಂದ ಕಣ್ಣನ್ನು ನಿಧಾನವಾಗಿ ತೊಳೆಯುವುದು ಮತ್ತು ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯುವುದು ಹಾಗೂ ಸ್ವಯಂ-ಔಷಧಿಗಳನ್ನು ಬಳಸಬಾರದು ಎಂದು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಕೇವಲ ಕ್ಷಣಿಕದ ಖುಷಿಗೋಸ್ಕರ ಇಡೀ ಜೀವನವೇ ಕತ್ತಲಾಗಲಿದೆ. ಸದ್ಯ ಅದೃಷ್ಟವಶಾತ್ ಐದು ಮಕ್ಕಳಿಗೆ ಕಣ್ಣಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನಾದರೂ ಪೋಷಕರು ಕೊಂಚ ಎಚ್ಚರ ವಹಿಸಬೇಕಿದೆ.