‘ಜಿಎಸ್‌ಟಿ 2.0 ಪ್ರಧಾನಿ ಮೋದಿಯ ದೀಪಾವಳಿ ಉಡುಗೊರೆ’: 54 ದೈನಂದಿನ ವಸ್ತುಗಳ ತೆರಿಗೆ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ- ನಿರ್ಮಲಾ ಸೀತಾರಾಮನ್

ನವದೆಹಲಿ: ಜಿಎಸ್‌ಟಿ 2.0 (GST 2.0) ರಿಪೋರ್ಟ್ ಕಾರ್ಡನ್ನು ಕೇಂದ್ರ ಸರ್ಕಾರ ಜನರ ಮುಂದಿಟ್ಟಿದೆ. ಪ್ರಧಾನಿ ಮೋದಿ ಅವರ ದೀಪಾವಳಿ ಉಡುಗೊರೆ ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಜಿಎಸ್‌ಟಿ ಉಳಿತಾಯ ಉತ್ಸವದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಜಿಎಸ್‌ಟಿ 2.0 ಸುಧಾರಣೆಗಳು ದೇಶದ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಿದ್ದು, ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ಗ್ರಾಹಕ ವಸ್ತುಗಳಂತಹ ಪ್ರಮುಖ ವಲಯಗಳಲ್ಲಿ ದಾಖಲೆಯ ಮಾರಾಟಕ್ಕೆ ಕಾರಣವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಸರ್ಕಾರವು ದಿನನಿತ್ಯ ಬಳಸುವ 54 ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅವುಗಳಲ್ಲಿ ಪ್ರತಿಯೊಂದರಲ್ಲೂ ಜಿಎಸ್‌ಟಿ ಸುಧಾರಣೆಗಳಿಂದಾಗಿ ತೆರಿಗೆ ಪ್ರಯೋಜನವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಧಾನ ಮಂತ್ರಿಯವರ ದೀಪಾವಳಿ ಉಡುಗೊರೆಯನ್ನು ತಲುಪಿಸಲಾಗಿದೆ ಎಂದು ಹೇಳಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ವರ್ಷದ ನವರಾತ್ರಿ ಉತ್ಸವದಲ್ಲಿ ದಾಖಲೆಯ ಮಾರಾಟ ನಡೆದಿದೆ. ಹಿಂದಿನ ನವರಾತ್ರಿ ಉತ್ಸವದಲ್ಲಿ ದಾಖಲಾದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ನವರಾತ್ರಿ ಋತುವಿನಲ್ಲಿ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಶೇ.25 ರಷ್ಟು ಹೆಚ್ಚಳವಾಗಿದೆ. ಜಿಎಸ್ಟಿ ಸುಧಾರಣೆಗಳಿಂದಾಗಿ ಆಹಾರದ ಬೆಲೆಗಳು ಕಡಿಮೆಯಾಗುತ್ತಿವೆ. ಎಲೆಕ್ಟ್ರಾನಿಕ್ಸ್‌ಗೆ ಹೆಚ್ಚುತ್ತಿರುವ ಬೇಡಿಕೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತಿದೆ ಎಂದು ವಿವರಿಸಿದ್ದಾರೆ.
ಕಳೆದ ತಿಂಗಳು ಸರ್ಕಾರವು ಜಿಎಸ್ಟಿ ಪರಿಷ್ಕರಿಸಿತು. ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳು, ಟಿವಿಗಳು ಮತ್ತು ಫ್ರಿಡ್ಜ್‌ಗಳಂತಹ ಗ್ರಾಹಕ ಬಾಳಿಕೆ ಬರುವ ವಸ್ತುಗಳ ಮೇಲಿನ ದರಗಳಲ್ಲಿ ತೀವ್ರ ಕಡಿತವನ್ನು ಘೋಷಿಸಿತು. ಜಿಎಸ್ಟಿ ಸುಧಾರಣೆಗಳು ನವರಾತ್ರಿಯ ಆರಂಭದ ಸೆ.22 ರಂದು ಜಾರಿಗೆ ಬಂದವು.