ಕಿಯಾ ಕಾರ್ ಖರೀದಿಸಿದ 26 ದಿನಗಳಲ್ಲೇ ಬೆಂಕಿಗೆ ಆಹುತಿ: ಉತ್ಪಾದನಾ ದೋಷ ಎಂದು ತೀರ್ಪು ನೀಡಿದ ಆಯೋಗ; ಗ್ರಾಹಕನಿಗೆ ಹೊಸ ವಾಹನ ನೀಡಲು ಆದೇಶ

ಧಾರವಾಡ : ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದ ಮಹಮ್ಮದ್ ತಾಹೀರ್ ತಂಬೋಳಿ ಎನ್ನುವವರು ಹುಬ್ಬಳ್ಳಿಯ ಅಮರಗೋಳದ ನಾಗಶಾಂತಿ ಮೋಟರ್ಸ್ರವರಿಂದ 16,60,000/- ಖರ್ಚು ಮಾಡಿ ಕಿಯಾ ವಾಹನ ಖರೀದಿಸಿದ್ದರು. ಆ ವಾಹನದ ಮೇಲೆ 36 ತಿಂಗಳಿನ ವಾರಂಟಿಯನ್ನು ವಾಹನದ ಉತ್ಪಾದಕರು ಕೊಟ್ಟಿದ್ದರು. ವಾಹನದ ನಿಲುಗಡೆ ಸಮಸ್ಯೆಯಿಂದ ದೂರುದಾರರು ತಮ್ಮ ವಾಹನವನ್ನು ಅವರ ಸಂಬಂಧಿಕರ ಮನೆ ಹತ್ತಿರ ನಿಲ್ಲಿಸುತ್ತಿದ್ದರು. 29.10.2022 ರಂದು ಕಿಯಾ ಸರ್ವಿಸ್ ಸೆಂಟರನಿಂದ ಉಚಿತ ಸರ್ವಿಸ್ ಮಾಡಿಸಿದ್ದರು. 10.11.2022 ರಂದು ಬೆಳಗಿನ ಜಾವ 3.30 ಸುಮಾರಿಗೆ ಪಾರ್ಕ್ ಮಾಡಿ ನಿಲ್ಲಿಸಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ ತಗಲಿ ಇಡೀ ವಾಹನ ಸುಟ್ಟು ಹೋಯಿತು.

ದೂರುದಾರರ ಕೋಟಕ್ ಮಹೇಂದ್ರದಿಂದ ಸಾಲ ಪಡೆದು ಆ ವಾಹನ ಖರೀದಿಸಿದ್ದರು ಅದನ್ನು ಖರೀದಿಸಿದ ಕೇವಲ 26 ದಿವಸದಲ್ಲಿ ಅದು ಸುಟ್ಟು ಹೋದದ್ದರಿಂದ ಆ ವಾಹನದ ಉತ್ಪಾದನೆಯಲ್ಲಿ ದೋಷ ಇದೆ ಅಂತ ಹೇಳಿ ಆ ಸಂಗತಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಕಿಯಾ ಮೋಟರ್ಸ ನಾಗಶಾಂತಿ ಸರ್ವಿಸ್ ಸೆಂಟರ್ ಹಾಗೂ ಲೋಂಬಾರ್ಡ ವಿಮಾ ಕಂಪನಿಯ ಮೇಲೆ ಕ್ರಮ ಕೈಗೋಳ್ಳುವಂತೆ ಕೋರಿ 01.08.2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ಶ್ರೀಮತಿ ವಿಶಾಲಾಕ್ಷಿ. ಅ.ಬೋಳಶೆಟ್ಟಿ ಸದಸ್ಯರು, ದೂರುದಾರರು ಸಾಲ ಮಾಡಿ 16,60,000 ಹಣ ವಿನಿಯೋಗಿಸಿ ಕಿಯಾ ಕಂಪನಿಯ ಕಾರನ್ನು ಡೀಲರರಾದ ನಾಗಶಾಂತಿ ಆಟೋ ಕಾರ್ರವರಿಂದ ಖರೀದಿಸಿದ್ದಾರೆ.
ಆ ವಾಹನವು 36 ತಿಂಗಳಿನ ವಾರಂಟಿಯನ್ನು ಹೊಂದಿರುತ್ತದೆ. ಖರೀದಿಸಿದ 26 ದಿನದಲ್ಲಿ ನಿಲ್ಲಿಸಿದ ಆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ವಾಹನ ಸುಟ್ಟು ಹೋಗಿದೆ. ಹೇರಳ ಮೊತ್ತದ ಹಣ ವಿನಿಯೋಗಿಸಿ ಆ ವಾಹನದ ಸೌಲಭ್ಯ ಅನುಭವಿಸಬೇಕು ಅಂತಾ ದೂರುದಾರ ಅದನ್ನು ಖರೀದಿಸಿದ್ದಾನೆ. ಇದರಿಂದ ದೂರುದಾರನಿಗೆ ಅನಾನೂಕೂಲ ನೋವು ಹಣಕಾಸಿನ ತೊಂದರೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ
ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ಡೀಲರಾದ ನಾಗಶಾಂತಿ ಮೋಟರ್ಸ್ ಮತ್ತು ಉತ್ಪಾದಕರಾದ ಕಿಯಾ ಮೋಟರ್ಸಗೆ ಹಾಗೂ ವಿಮಾ ಕಂಪನಿಗೆ ದೂರುದಾರ ದೂರು ಕೊಟ್ಟರು ಏನು ಪ್ರಯೋಜನ ಆಗಿಲ್ಲ. ವಿಚಾರಣೆಯಲ್ಲಿ ಉಭಯತರು ಸಾಕ್ಷದಾರ ಹಾಜರು ಮಾಡಿದ್ದಾರೆ.
ಅದನ್ನು ಪರಿಶಿಲಿಸಿದಾಗ ನಿಂತ ಹೊಸ ವಾಹನದಲ್ಲಿ ಅದನ್ನು ಖರೀದಿಸಿದ ಕೇವಲ 26 ದಿನದಲ್ಲಿ ಬೆಂಕಿ ಹತ್ತಿ ಆ ವಾಹನ ಸುಟ್ಟು ಹೋಗಿರುವುದು ಅದರ ಉತ್ಪಾದಕ ದೋಷದಿಂದ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಉತ್ಪಾದನೆ ದೋಷದಿಂದ ಬೆಂಕಿ ತಗಲಿ ವಾಹನ ಸುಟ್ಟು ಹೋಗಿರುವುದರಿಂದ ಉತ್ಪಾದಕರಾದ ಕಿಯಾ ಮೋಟರ್ಸರವರು ದೂರುದಾರರಿಗೆ ಆಗಿರುವ ನಷ್ಟ ಭರಿಸಲು ಬದ್ಧರಿದ್ದಾರೆಂದು ಆಯೋಗ ತೀರ್ಮಾನಿಸಿದೆ. ಆದೇಶವಾದ ಒಂದು ತಿಂಗಳ ಒಳಗಾಗಿ ಎದುರುದಾರ ಕಿಯಾ ಮೋಟರ್ಸ್ರವರು ಅದೇ ಬ್ರಾಂಡ್ ವಿನ್ಯಾಸದ ರೋಡ್ ಟ್ಯಾಕ್ಸ್ನೊಂದಿಗೆ ಹೊಸ ವಾಹನವನ್ನು ದೂರುದಾರರಿಗೆ ಕೊಡಬೇಕು ಅಂತಾ ನಿರ್ದೇಶಿಸಿದೆ.
ಆಂಧ್ರ ಪ್ರದೇಶದ ಕಿಯಾ ಇಂಡಿಯಾ ಪ್ರೈ.ಲಿಮಿಟೆಡ್
ತಪ್ಪಿದಲ್ಲಿ ವಾಹನ ಖರೀದಿಯ ಮೌಲ್ಯರೂ16,60,000 ಮತ್ತು ಅದರ ಮೇಲೆ ವಾಹನ ಸುಟ್ಟ ದಿನಾಂಕ 10.11.2022 ರಿಂದ ಶೇ8 % ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಪೂರ್ತಿ ಹಣ ಸಂದಾಯ ಮಾಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ. ಅಲ್ಲದೆ ದೂರುದಾರರಿಗೆ ಆಗಿರುವ ಅನಾನುಕೂಲ ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚುವೆಚ್ಚ ರೂ.10,000 ಪಾವತಿಸುವಂತೆ ಎದುರುದಾರರಾದ ಆಂಧ್ರ ಪ್ರದೇಶದ ಕಿಯಾ ಇಂಡಿಯಾ ಪ್ರೈ.ಲಿಮಿಟೆಡ್ಗೆ ಆಯೋಗ ನಿರ್ದೇಶಿಸಿದೆ.