ಮದುವೆ ಆದ ಜೋಡಿಗೆ ಜೀವ ಬೆದರಿಕೆ, ಪೋಷಕರೇ ವಿಲನ್.

ಚಿತ್ರದುರ್ಗ: ಎಸ್ಎಸ್ಎಲ್ಸಿ ವರೆಗೆ ಓದಿ ಊರಿನಲ್ಲೇ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿರುವ ಯುವಕನ ಜತೆ ಬೆಂಗಳೂರಿಗೆ ತೆರಳಿ ಎಂಜಿನಿಯರಿಂಗ್ ಓದುತ್ತಿರುವ ಯುವತಿಗೆ ಲವ್! ಪೋಷಕರ ವಿರೋಧದ ಮಧ್ಯೆಯೂ ಮದುವೆ. ಇದೀಗ ಯುವ ಜೋಡಿಗೆ ಪೋಷಕರೇ ವಿಲನ್ ಆಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವಿದ್ಯಮಾನ ನಡೆದಿದ್ದು ಚಿತ್ರದುರ್ಗದಲ್ಲಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿಯ ಅಮೃತಾ ಪಿಯುಸಿ ಪಾಸಾಗಿದ್ದು ಬೆಂಗಳೂರಲ್ಲಿ ಬಿಇ ಓದುತ್ತಿದ್ದಾಳೆ. ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿ ಮಾವನೇ ಆದ ಸ್ವಗ್ರಾಮದ ಮಾರುತಿಯನ್ನು ಪ್ರೇಮಿಸುತ್ತಿದ್ದಾಳೆ. ವಿಷಯ ತಿಳಿದ ಯುವತಿಯ ಪೋಷಕರು ಉಗ್ರ ಸ್ವರೂಪ ತಾಳಿದ್ದಾರೆ. ಯುವತಿಗೆ ಇಲ್ಲದ ಕಿರುಕುಳ ನೀಡಿ ಮಾರುತಿಗೂ ಜೀವ ಬೆದರಿಕೆ ಹಾಕಿದ್ದಾರೆ. ಯುವಕ ಎಸ್ಎಸ್ಎಲ್ಸಿ ಮಾತ್ರ ಓದಿದ್ದು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ, ಬಡತನದ ಕುಟುಂಬ ಮತ್ತು ಶಿಕ್ಷಣ ಇಲ್ಲದ ಕಾರಣ ಪ್ರೇಮ ವಿವಾಹಕ್ಕೆ ವಿರೋಧಿಸಿದ್ದಾರೆಂದು ಅಮೃತಾ ಆರೋಪಿಸಿದ್ದಾಳೆ.

ಅಮೃತಾಳ ಪೋಷಕರ ಬೆದರಿಕೆ, ವಿವಾಹಕ್ಕೆ ವಿರೋಧದಿಂದ ಕಂಗಾಲಾದ ಮಾರುತಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಕೊನೆಗೆ ಅಮೃತಾಳೇ ಬೆಂಗಳೂರಿಂದ ಆಗಮಿಸಿ ಮಾರುತಿಯನ್ನು ಡಿಸ್ಚಾರ್ಜ್ ಮಾಡಿಸಿ ದೇಗುಲದಲ್ಲಿ ಮದುವೆ ಆಗಿದ್ದಾಳೆ. ಪೋಷಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಿ ಬದುಕಲು ಬಿಡಿ ಎಂದು ಯುವ ಜೋಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಆಗಮಿಸಿ ಗುರುವಾರ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ರಾಮಜೋಗಿಹಳ್ಳಿಯ ಅಮೃತಾ ಮತ್ತು ಮಾರುತಿ ಪೋಷಕರ ವಿರೋಧ ಲೆಕ್ಕಿಸದೆ ಮದುವೆ ಆಗಿದ್ದಾರೆ. ಅಂತಸ್ತು ಮತ್ತು ಶಿಕ್ಷಣದ ಬಗ್ಗೆ ತಕರಾರು ತೆಗೆದು ಅಮೃತಾ ಪೋಷಕರು ಯುವ ಜೋಡಿಯ ಪಾಲಿಗೆ ವಿಲನ್ ಆಗಿದ್ದಾರೆ. ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.