ಟೀಮ್ ಇಂಡಿಯಾ ಎದುರಿನ ಮಹತ್ವದ ಪಂದ್ಯಕ್ಕೆ ದೊಡ್ಡ ಆಘಾತ: ಎದುರಾಳಿ ತಂಡದ ಇಬ್ಬರು ಪ್ರಮುಖ ಆಟಗಾರರು ಅಲಭ್ಯ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಪರ್ತ್ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರು ಅಲಭ್ಯರಾಗಲಿದ್ದಾರೆ.

ಅಕ್ಟೋಬರ್ 19 ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಆಸ್ಟ್ರೇಲಿಯನ್ ಸ್ಪಿನ್ನರ್ ಆ್ಯಡಂ ಝಂಪಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಹೊರಗುಳಿಯಲಿದ್ದಾರೆ. ಇಬ್ಬರು ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ದ್ವಿತೀಯ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಆ್ಯಡಂ ಝಂಪಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ಪರ್ತ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇನ್ನು ಜೋಶ್ ಇಂಗ್ಲಿಸ್ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ
ಇನ್ನು ಆ್ಯಡಂ ಝಂಪಾ ಹಾಗೂ ಜೋಸ್ ಇಂಗ್ಲಿಸ್ ಬದಲಿಗೆ ಮೊದಲ ಏಕದಿನ ಪಂದ್ಯಕ್ಕಾಗಿ ಮ್ಯಾಥ್ಯೂ ಕುಹ್ನೆಮನ್ ಹಾಗೂ ಜೋಶ್ ಫಿಲಿಪ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಅಥವಾ ಜೋಶ್ ಫಿಲಿಪ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಬಹುದು.
ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಫಿಲಿಪ್ , ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್,ಮ್ಯಾಥ್ಯೂ ಕುಹ್ನೆಮನ್.